ಸಾರಾಂಶ
ಕೊಪ್ಪಳ: ಈ ವರ್ಷದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಜರುಗಿದ ಕಾಯಕ ದೇವೋಭವ ಜಾಗೃತಿ ಜಾಥಾದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ನಗರದ ತಾಲೂಕು ಕ್ರೀಡಾಂಗಣದಿಂದ ಆರಂಭವಾದ ಜಾಗೃತಿ ನಡಿಗೆ ನಗರದ ಪ್ರಮುಖ ವೃತ್ತಗಳ ಮೂಲಕ ಗವಿಮಠ ತಲುಪಿತು. ಜಾಗೃತಿ ನಡಿಗೆ ಉದ್ದಕ್ಕೂ ಸ್ವಾವಲಂಬಿ ಬದುಕಿಗೆ ಕಾಯಕ ಮಾಡುವುದೇ ಪ್ರೇರಣೆ ಎಂಬ ಘೋಷಣೆಗಳು ಕೇಳಿ ಬಂದವು. ಸಾಲುಗಟ್ಟಿ ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಹಿಡಿದು ಸಾಗಿದರು. ಸಾರ್ವಜನಿಕ ಮೈದಾನದಿಂದ ಆರಂಭಗೊಂಡ ಈ ಜಾಗೃತಿ ಜಾಥಾವು ಅಶೋಕ ವೃತ್ತ, ಗಡಿಯಾರ ಕಂಬದ ಮೂಲಕ ಶ್ರೀ ಗವಿಮಠಕ್ಕೆ ತಲುಪಿತು.2-3 ಕಿಲೋಮೀಟರ್‌ಗಟ್ಟಲೇ ವಿದ್ಯಾರ್ಥಿಗಳ ಸಾಲು:
ಜಾಗೃತಿ ಜಾಥಾದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಜಾಗೃತಿ ಜಾಥಾದ ಸಾಲು ಸುಮಾರು ಎರಡರಿಂದ ಮೂರು ಕಿಮೀ ಉದ್ದದಷ್ಟಿತ್ತು. ಇದೊಂದು ಬೃಹತ್ ಜಾಗೃತಿ ಜಾಥಾ ಆಗಿದ್ದು, ಗವಿಸಿದ್ದೇಶ್ವರ ಜಾತ್ರೆ ನಿಮಿತ್ತ ಜರುಗಿದ ಕಾಯಕದೇವೋ ಭವ ಜಾಗೃತಿ ಜಾಥಾಕ್ಕೆ ಹತ್ತಾರು ಸಾವಿರ ವಿದ್ಯಾರ್ಥಿಗಳು, ಅಪಾರ ಜನರು, ಶಿಕ್ಷಕರು, ಅಧಿಕಾರಿಗಳು, ಭಕ್ತರು ಸಾಕ್ಷಿಯಾದರು.ಅಸ್ಮಿತೆ ವಸ್ತು ಪ್ರದರ್ಶನ, ಮಾರಾಟ ಮೇಳ:ಬೆಂಗಳೂರಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಕೊಪ್ಪಳ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕೌಶಲ್ಯ ಮಿಷನ್ ಇವರ ಸಹಯೋಗದಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2024ರ ಪ್ರಯುಕ್ತ ಶ್ರೀ ಗವಿಮಠದ ಜಾಗೃತಿ ನಡಿಗೆ ಕಾಯಕ ದೇವೋಭವ ಅಭಿಯಾನದಡಿ ಅಸ್ಮಿತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜ. 27ರಿಂದ ಫೆ. 9ರ ವರೆಗೆ ಜಾತ್ರಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ಅಸ್ಮಿತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಜ. 27ರಿಂದ ಫೆ. 9ರ ವರೆಗೆ ಬೆಳಗ್ಗೆ 10.30ರಿಂದ ರಾತ್ರಿ 9.30ರ ವರೆಗೆ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ಸಾರ್ವಜನಿಕರು ಅಸ್ಮಿತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭೇಟಿ ನೀಡಿ, ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಾಣೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.