ಸಾರಾಂಶ
ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಇಲ್ಲಿಯ ಗವಿಸಿದ್ಧೇಶ್ವರರ ೨೦೮ನೇ ಮಹಾರಥೋತ್ಸವ ಶನಿವಾರ
ಸಂಜೆ ಸೂರ್ಯನ ಹೊನ್ನ ಕಿರಣಗಳ ಹೊಂಬೆಳಕಲ್ಲಿ ಸುಮಾರು 8 ಲಕ್ಷ ಭಕ್ತರ ಹರ್ಷೋದ್ಗಾರಗಳ ನಡುವೆ ಅದ್ಧೂರಿಯಾಗಿ ನೆರವೇರಿತು. ಸೇರಿದ್ದ ಭಕ್ತಕೋಟಿಯ ಜೈಕಾರ ಮುಗಿಲು ಮುಟ್ಟಿತ್ತು. ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಸವಪಟ ಆರೋಹಣ ನೆರವೇರಿಸುವ ಮೂಲಕ ಐತಿಹಾಸಿಕ ರಥೋತ್ಸವಕ್ಕೆ ಚಾಲನೆ ನೀಡಿದರು. ಗವಿಸಿದ್ಧೇಶ್ವರ ಶ್ರೀ ಲಕ್ಷಾಂತರ ಭಕ್ತರಿಗೆ ರಥ ಎಳೆಯಲು ಸನ್ನೆ ಮಾಡಿದಾಗ 58 ಅಡಿ ಎತ್ತರದ ತೇರು ಗಜಗಾಂಭೀರ್ಯದಿಂದ ರಥಬೀದಿಯಲ್ಲಿ ಸಾಗಿತು. ಹೀಗೆ ಸಾಗುತ್ತಿದ್ದಂತೆಯೇ ಭಕ್ತಗಣ ಉತ್ತತ್ತಿ ಎಸೆದು ಪುನೀತರಾದರು.ಡಾ.ಅಭಿನವ ಚೆನ್ನಬಸವ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಹರಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು.ಇದಕ್ಕೂ ಮೊದಲು ೧೧ನೇ ಪೀಠಾಧಿಪತಿ ಆಗಿದ ಗವಿಸಿದ್ಧೇಶ್ವರ ಶ್ರೀಗಳ ಕರ್ತೃ ಗದ್ದುಗೆಯಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಬಳಿಕ ಗವಿಸಿದ್ಧೇಶ್ವರ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಮೆರವಣಿಗೆಯಲ್ಲಿ ಕರೆತರಲಾಯಿತು. ಗವಿಸಿದ್ದೇಶ್ವರ ಶ್ರೀ ಸೇರಿದಂತೆ ಹರಗುರು ಚರಮೂರ್ತಿಗಳು ಮುಂದೆ ಸಾಗುತ್ತಿದ್ದಂತೆ ಅವರ ಬೆನ್ನ ಹಿಂದೆ ಉಳಿದ ಶ್ರೀಗಳು ಸಾಗುವ ದೃಶ್ಯ ಶರಣ ಸಂಸ್ಕೃತಿಯ ಪ್ರತೀಕದಂತೆ ಕಾಣುತ್ತಿತ್ತು.ವಾದ್ಯ ವೃಂದದ ಮೂಲಕ ಮೆರವಣಿಗೆ ಮಾಡುತ್ತಾ ರಥದ ಸುತ್ತ ಐದು ಸುತ್ತು ಪ್ರದಕ್ಷಿಣೆ ಹಾಕಿ, ಮೂರ್ತಿಯನ್ನು ರಥದಲ್ಲಿ ಇರಿಸಲಾಯಿತು. ನಂತರ ಬಸವ ಪಟ ಆರೋಹಣ ನೆರವೇರಿಸುತ್ತಿದ್ದಂತೆ ರಥೋತ್ಸವ ಸಾಂಗವಾಯಿತು. ಭಕ್ತ ಗಣ ಜೈಕಾರ ಹಾಕಿ ಸಂಭ್ರಮಿಸಿದರು. ಬಳಿಕ ಪಾದಗಟ್ಟೆ ತಲುಪಿ ರಥ ವಾಪವಾಸುಗುತ್ತಿದ್ದಂತೆ ಜಯಕಾರ ಹಾಗೂ ಕರತಾಡನ ಮುಗಿಲು ಮುಟ್ಟಿತ್ತು.ನೆರೆದಿದ್ದ ಲಕ್ಷಾಂತರ ಭಕ್ತರು ಏಕಧ್ವನಿಯಲ್ಲಿ ಗವಿಸಿದ್ದೇಶ್ವರ ಮಹಾರಾಜಕೀ ಜೈ ಎಂಬ ಜಯಕಾರ ಕೂಗಿದರು. ರಥ ಎಳೆಯಲು ಭಕ್ತರ ನಡುವೆ ಪೈಪೋಟಿ ಕಂಡು ಬಂತು. ಭಕ್ತರು ಭಾವ ಪರವಶರಾಗಿ ಉತ್ತತ್ತಿ, ಹಣ್ಣು ಎಸೆದು ಪುನೀತರಾದರು. ಮಹಾರಥೋತ್ಸವದಲ್ಲಿ ನಂದಿಕೋಲು ಕುಣಿತ, ಪಲ್ಲಕ್ಕಿ ಮೆರವಣಿಗೆ, ಇನಾಮು, ಪಂಜುಗಳ ಮೇಳಗಳು ರಥೋತ್ಸವಕ್ಕೆ ಕಳೆ ತಂದವು. ರಥೋತ್ಸವ ಯಶಸ್ವಿಗೊಂಡಿದ್ದಕ್ಕೆ ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.ಹರಿದು ಬಂದ ಜನಸಾಗರ:ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಪ್ರಸಕ್ತ ವರ್ಷ ಹಿಂದಿನ ಎಲ್ಲ ದಾಖಲೆ ಮೀರಿ ಜನ ಸಾಗರ ಹರಿದು ಬಂದಿತ್ತು. ಸುಮಾರು 8 ಲಕ್ಷ ಭಕ್ತರು ಪಾಲ್ಗೊಂಡಿದ್ದರೆಂದು ಹೇಳಲಾಗಿದೆ. ಅಜ್ಜನ ಜಾತ್ರೆ ಎಂದೇ ಖ್ಯಾತಿ ಆಗಿರುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹೊಸ ಇತಿಹಾಸವಾಗಿದೆ. ಜಾತ್ರೆ, ರಥೋತ್ಸವಕ್ಕೆ ಹೊಸ ಭಾಷ್ಯೆ ಬರೆದಿದೆ. ರಾಜ್ಯದ ಜಾತ್ರಾ ಪರಂಪರೆಯಲ್ಲಿ ಇದೊಂದು ಮೈಲಿಗಲ್ಲಾಗಿದೆ.ಶಕ್ತಿ ಯೋಜನೆಯ ಪರಿಣಾಮ ಪುರುಷರಿಗಿಂತ ಮಹಿಳೆಯರೇ ಅಧಿಕ ಪ್ರಮಾಣದಲ್ಲಿ ಬಂದಿರುವುದು ಕಂಡುಬಂದಿತು. ಕೊಪ್ಪಳಕ್ಕೆ ಬರುವ ಅಷ್ಟೂ ವಾಹನಗಳು ಭರ್ತಿಯಾಗಿಯೇ ಬಂದವು. ರೈಲುಗಳೂ ತುಂಬಿ ತುಳುಕುತ್ತಿದ್ದವು.ಗವಿಮಠದಲ್ಲಿ ಜನಸಾಗರವೇ ಸೇರಿತ್ತು. ಮೈದಾನದ ಸುತ್ತಮುತ್ತಲಿನ ಗಿಡ, ಮರ ಕಟ್ಟಡಗಳ ಮೇಲೆಯೂ ಜನವೇ ನೆರೆದಿದ್ದರು. ಗವಿಮಠದ ಗುಡ್ಡವೆಲ್ಲ ಜನರಿಂದ ಮುಚ್ಚಿ ಹೋದಂತೆ ಭಾಸವಾಗುತ್ತಿತ್ತು. ಅಷ್ಟೂ ರಸ್ತೆಗಳಲ್ಲಿ ಭಕ್ತರು ನದಿಯಂತೆ ಹರಿದು ಬರುತ್ತಿದ್ದರು. ಮೈದಾನದಲ್ಲಿ ಜಾಗ ಸಾಲದ್ದಕ್ಕೆ ಎಲ್ಲಿ ಜಾಗ ಸಿಗುತ್ತಿತ್ತೋ ಅಲ್ಲೆಲ್ಲ ಜನವೋ ಜನ ಎನ್ನುವಂತಾಗಿತ್ತು.ಪಲ್ಲಕ್ಕಿ ಹೊತ್ತ ಡಿಕೆಶಿ:ಗವಿಸಿದ್ಧೇಶ್ವರ ರಥೋತ್ಸವಕ್ಕೂ ಮುನ್ನ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಪಲ್ಲಕ್ಕಿ ಹೊತ್ತು ಸಾಗಿದರು.ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಹೊತ್ತಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಉಪ ಮುಖ್ಯಮಂತ್ರಿಯೊಬ್ಬರು ಗವಿಸಿದ್ಧೇಶ್ವರ ಮೂರ್ತಿಯ ಪಲ್ಲಕ್ಕಿ ಹೊತ್ತಿರುವುದು ಇದೇ ಮೊದಲು.ವೇದಿಕೆಯಲ್ಲಿ ಕುಳಿತಿದ್ದ ಡಿಕೆಶಿ ಪಲ್ಲಕ್ಕಿ ಆಗಮಿಸುತ್ತಿದ್ದಂತೆ ಕೆಳಗೆ ಇಳಿದು ಹೋಗಿ, ಲಕ್ಷಾಂತರ ಭಕ್ತರ ಮಧ್ಯ ತೆರಳಿ ಪಲ್ಲಕ್ಕಿ ಹೊತ್ತರು. ಇವರಿಗೆ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಸಾಥ್ ನೀಡಿದರು.