ಕಾಶಿ ಜ್ಞಾನವಾಪಿಯಲ್ಲಿ ಸಿಕ್ಕ ಕನ್ನಡ ಶಾಸನ 16ನೇ ಶತಮಾನದ್ದು

| Published : Jan 28 2024, 01:18 AM IST

ಕಾಶಿ ಜ್ಞಾನವಾಪಿಯಲ್ಲಿ ಸಿಕ್ಕ ಕನ್ನಡ ಶಾಸನ 16ನೇ ಶತಮಾನದ್ದು
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡರಸಯ್ಯನ ನರಸಂಣನಬಿಂನಹ ಎಂದು ಬರೆದಿರುವ ಶಾಸನ ಎಎಸ್‌ಐ ನಡೆಸಿದ ಜ್ಞಾನವಾಪಿ ಸಮೀಕ್ಷೆಯಲ್ಲಿ ಪತ್ತೆಯಾಗಿದೆ.

ವಾರಾಣಸಿ: ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ನಡೆಸಿದ ಸಮೀಕ್ಷೆಯ ವೇಳೆ ಹಿಂದೂ ದೇವರ ವಿಗ್ರಹಗಳು ಹಾಗೂ ಕನ್ನಡ ಸೇರಿ ಕೆಲವು ಭಾಷೆಗಳ ಶಿಲಾಶಾಸನ ಕಂಡುಬಂದಿವೆ ಎಂಬುದು 2 ದಿನದ ಹಿಂದೆ ಬಹಿರಂಗವಾಗಿತ್ತು. ಈಗ ಈ ಕನ್ನಡದ ಶಾಸನ 16ನೇ ಶತಮಾನದ್ದು ಎಂಬುದು ಹಾಗೂ ಅದರ ಒಳಗೆ ‘ದೊಡ್ಡರಸಯ್ಯನ ನರಸಂಣನಬಿಂನಹ’ ಎಂಬ ಬರಹವಿರುವುದು ಪತ್ತೆಯಾಗಿದೆ.

ಈ ಮೂಲಕ ಮತ್ತೆ ಕನ್ನಡದ ಇತಿಹಾಸ ವ್ಯಾಪ್ತಿಯ ಕುರಿತು ಹೊಸ ಚರ್ಚೆ ಆರಂಭವಾಗಿದೆ. ಜ್ಞಾನವಾಪಿ ಕಟ್ಟಡದ ಗೋಡೆಯ ಮೇಲೆ ಕೆತ್ತಿರುವ ಶಾಸನದಲ್ಲಿ ದೊಡ್ಡರಸಯ್ಯನ ನರಸಂಣನಬಿಂನಹ ಎಂದು ಬರೆದ ಬರಹ ಹಳಗನ್ನಡದ್ದಾಗಿದೆ. ಇದನ್ನು 16ನೇ ಶತಮಾನದಲ್ಲಿ ಕೆತ್ತಿರಬಹುದು ಎಂದು ಎಎಸ್‌ಐ ಅಂದಾಜಿಸಿದೆ.

ಇತಿಹಾಸ ತಜ್ಞರು ಹೇಳುವುದೇನು?:

ಕನ್ನಡ ಶಾಸನದ ವಿವರಗಳನ್ನು ತಜ್ಞರು ಅಂದಾಜಿಸಿರುವಂತೆ, ಈ ಬರಹಗಳು ಅಲ್ಲಿದ್ದ ವಿಶ್ವನಾಥ ದೇಗುಲಕ್ಕೆ ದೇಣಿಗೆ ನೀಡಿದವರ ಹೆಸರಾಗಿರಬಹುದು ಎಂದು ಅಂದಾಜಿಸಿದ್ದಾರೆ. ಮತ್ತೊಂದು ಅಂದಾಜಿನ ಪ್ರಕಾರ, ಕೋಲಾರ ಮೂಲದ ಪಾಳೇಗಾರರು ಅಲ್ಲಿ ಭೂಮಿಯನ್ನು ದೇಗುಲಕ್ಕೆ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.

--ಇವು ಕೋಲಾರ, ಚಿಕ್ಕಬಳ್ಳಾಪುರ

ಕಡೆಯ ಪದ: ಚಿಕ್ಕರಂಗೇಗೌಡ

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಜ್ಞಾನವಾಪಿಯಲ್ಲಿ ದೊಡ್ಡರಸಯ್ಯನ ನರಸಂಣನಬಿಂನಹ’ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂಬ ಶಾಸನ ಪತ್ತೆಯಾಗಿದ್ದು, ದೊಡ್ಡರಸಯ್ಯನ ಮಗ ನರಸಣ್ಣ ಎನ್ನುವವರು ಸೇವಾರ್ಥ ಮಾಡಿದ್ದಾರೆ ಎಂದರ್ಥ. ಈ ಪದಗಳು ಕೋಲಾರ, ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದದ್ದನ್ನು ಕಾಣುತ್ತೇವೆ. ದೇವರಿಗೆ ದಾನ ಕೊಡಬೇಕಾದರೆ ಭಿನ್ನಹ ಎಂಬ ಶಬ್ದ ಬಳಕೆಯಾಗುತ್ತದೆ. ಸಣ್ಣ ಅಥವಾ ದೊಡ್ಡ ಕಟ್ಟಡ ಕಟ್ಟಿರುವ ಸಾಧ್ಯತೆಯಿದೆ ಎಂದು ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೇಳಿದಂತೆ ಇದು 16ನೇ ಶತಮಾನದ್ದು. ಆಗ ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯವಿತ್ತು. ಶಾಸನ ಬರೆಸಿದವರು ವಿಜಯನಗರದ ಸಾಮಂತರು, ವ್ಯಾಪಾರಿಗಳು ಅಥವಾ ಅಧಿಕಾರಿಗಳಾಗಿರಬಹುದು. ಹೀಗೆ ಕರ್ನಾಟಕದ ರಾಜರು ಕಾಶಿಯಲ್ಲಿ ಸೇವೆ ಸಲ್ಲಿಸುವುದು ಹೊಸದಲ್ಲ. ಕಾಶಿ ವಿಶ್ವನಾಥನಿಗೆ ದಾನ ಧರ್ಮ ನೀಡಿರುವ ಉಲ್ಲೇಖಗಳು ಸಾಕಷ್ಟಿವೆ. ಹತ್ತನೇ ಚಾಮರಾಜ ಒಡೆಯರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅಲ್ಲಿ ದತ್ತಿಯಿಟ್ಟ ಉದಾಹರಣೆ ಇದೆ ಎಂದರು.

ವಾರ್ಷಿಕ ಪೂಜೆ, ಪೌರ್ಣಮಿ, ಪಟ್ಟಾಭಿಷೇಕದ ಪ್ರಯುಕ್ತ ತಮ್ಮ ರಾಜನಿಗೆ ಒಳಿತಾಗಲಿ ಎಂದು ಸೇವಾರ್ಥ ಮಾಡಿ ಶಾಸನ ಬರೆಸಿರಬಹುದು. ಕಾಶಿಗೆ ಹೋಗಿ ಸೇವೆ ಸಲ್ಲಿಸಿ ಶಾಸನ ಬರೆದಿದ್ದಾರೆ ಎಂದರೆ ಸಾಮ್ರಾಟರಿಗೆ ಹತ್ತಿರದವರೇ ಆಗಿರುತ್ತಾರೆ. ರಾಜ್ಯದ ಶಾಸನಗಳಲ್ಲಿ ಇವರ ಬಗ್ಗೆ ಉಲ್ಲೇಖ ಇರುವುದು ಗಮನಕ್ಕಿಲ್ಲ. ಹೀಗಾಗಿ ಹೆಚ್ಚಿನ ಅಧ್ಯಯನ ಆದಲ್ಲಿ ಇತಿಹಾಸದ ಕೊಂಡಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಬಹುದು ಎಂದು ಹೇಳಿದರು.

ರಾಜ್ಯದಿಂದ ಇತಿಹಾಸ ತಜ್ಞರನ್ನು ಅಲ್ಲಿಗೆ ಕಳಿಸಿ ಶಾಸನ ಅಧ್ಯಯನ, ಕ್ಷೇತ್ರಕಾರ್ಯ ಮಾಡಿಸಬೇಕು. ಇದರಿಂದ ಕನ್ನಡಿಗರು ಕಾಶಿಗಾಗಿ ಏನೇನು ಮಾಡಿದ್ದಾರೆ ಎಂಬುದು ತಿಳಿಯಲು ಸಾಧ್ಯವಾಗಲಿದೆ. ಇದರಿಂದ ಕಾಶಿ-ಕನ್ನಡದ ಸಂಪುಟ ರಚಿಸಲು ಸಾಧ್ಯವಾಗಲಿದೆ ಎಂದು ಚಿಕ್ಕರಂಗೇಗೌಡ ಒತ್ತಾಯಿಸಿದರು.

--

ಇನ್ನಷ್ಟು ಶಾಸನ ಸಿಗಬಹುದು:

ದೇವರಕೊಂಡಾರೆಡ್ಡಿ ಅಭಿಮತ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪುಣ್ಯಕ್ಷೇತ್ರಕ್ಕೆ ಬಂದವರು ನೆಲದಲ್ಲಿ ಈ ರೀತಿ ಬರೆಸುವುದುಂಟು. ಜನ ತಮ್ಮ ಹೆಸರನ್ನು ತುಳಿದು ಓಡಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬುದು ಇದರ ಉದ್ದೇಶ. ಈ ಶಾಸನವನ್ನೂ ಹೀಗೆ ಬರೆಸಿರಬಹುದು. ಆದರೆ, ಇದನ್ನು ನೆಲದಲ್ಲಿ ಬರೆಸಿದ ಬಗ್ಗೆ ಮಾಹಿತಿಯಿಲ್ಲ. ಕೆಳದಿ ಅರಸ ವೆಂಕಟಪ್ಪ ದೇವಸ್ಥಾನದಲ್ಲಿ ಈ ರೀತಿ ಬರೆಸಿದ್ದಾರೆ. ಇನ್ನು, ತೀರ್ಥಕ್ಷೇತ್ರಕ್ಕೆ ಹೋದ ಸಾಮಾನ್ಯ ಜನರೂ ಶಾಸನ ಬರೆಸಿದ ಉದಾಹರಣೆ ಇದೆ ಎಂದು ಇತಿಹಾಸಕಾರ ಡಾ. ದೇವರಕೊಂಡಾರೆಡ್ಡಿ ತಿಳಿಸಿದ್ದಾರೆ.

ಕಾಶಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ಗಂಗಾನದಿಯ ಸಮೀಪ ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನ ಶಾಸನ ಸಿಗುತ್ತದೆ. ಕೊಡಗಿನ ಚಿಕ್ಕವೀರರಾಜೇಂದ್ರರ ಸಮಾಧಿ ಜಂಗಮವಾಡಿ ಮಠದಲ್ಲಿದೆ. ಅಧ್ಯಯನ ನಡೆದರೆ ಇಂತಹ ಇನ್ನು ಕೆಲ ಕನ್ನಡದ ಶಾಸನಗಳು ಜ್ಞಾನವಾಪಿಯಲ್ಲಿ ಸಿಗುವ ಸಾಧ್ಯತೆಯಿದೆ ಎಂದು ತಿಳಿಸಿದರು.+++

ಒಟ್ಟು 34 ಶಾಸನ ಪತ್ತೆ:ಜ್ಞಾನವಾಪಿ ಮಸೀದಿಯ ಜಾಗದಲ್ಲಿ ಮೊದಲಿಗೆ ದೇಗುಲ ಇರುವುದಕ್ಕೆ ಇದರ ಜೊತೆಗೆ ಹಲವಾರು ಸಾಕ್ಷ್ಯಗಳು ಪತ್ತೆಯಾಗಿವೆ. ಪ್ರಮುಖವಾಗಿ ಕನ್ನಡ, ತೆಲುಗು, ದೇವನಾಗರಿ ಸೇರಿದಂತೆ ಹಲವು ಭಾಷೆಗಳ 34 ಶಾಸನಗಳು ಅಲ್ಲಿ ಪತ್ತೆಯಾಗಿವೆ. ಹಿಂದೂ ವಿಗ್ರಹಗಳೂ ಕಾಣಸಿಕ್ಕಿವೆ. ಅವುಗಳ ಚಿತ್ರವನ್ನೂ ಸಹ ಸರ್ವೇಕ್ಷಣಾ ಇಲಾಖೆ, ಸಮೀಕ್ಷೆಯಲ್ಲಿ ಪ್ರಕಟಿಸಿದೆ.