ಸಾರಾಂಶ
ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ‘ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’, ‘ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’, ‘ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ ಹಾಗೂ ಬಿಬಿಎಂಪಿ ಮಟ್ಟದಲ್ಲಿ ‘ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ ರಚನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ‘ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’, ‘ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’, ‘ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ ಹಾಗೂ ಬಿಬಿಎಂಪಿ ಮಟ್ಟದಲ್ಲಿ ‘ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ ರಚನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳ ಬಗ್ಗೆ ಆದೇಶ ಹೊರಡಿಸಿದೆ.ಇದರಂತೆ ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಸಚಿವ ಸಂಪುಟ ದರ್ಜೆಯ ಒಬ್ಬರು ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನದೊಂದಿಗೆ 5 ಮಂದಿ ಉಪಾಧ್ಯಕ್ಷರು, ಜಿಲ್ಲಾ ಪ್ರಾತಿನಿಧ್ಯಕ್ಕಾಗಿ 31 ಜಿಲ್ಲೆಗಳಿಂದ 31 ಮಂದಿಯನ್ನು ಸದಸ್ಯರನ್ನಾಗಿ ಹಾಗೂ ಒಬ್ಬರು ಹಿರಿಯ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.ಐದು ವಿಭಾಗಗಳಾಗಿ ವಿಂಗಡಣೆ:ಇನ್ನು ರಾಜ್ಯದ ಜಿಲ್ಲೆಗಳನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಿ ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರದ ಐದು ಮಂದಿ ಉಪಾಧ್ಯಕ್ಷರುಗಳಿಗೆ ತಲಾ ಒಂದೊಂದು ವಿಭಾಗಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಬೇಕು.ಸದಸ್ಯ ಕಾರ್ಯದರ್ಶಿಯು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಇತರೆ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಲ್ಲಿ ಒಬ್ಬರನ್ನು ರಾಜ್ಯಮಟ್ಟದ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ತಿಳಿಸಲಾಗಿದೆ.ಜಿಲ್ಲಾ ಮಟ್ಟದ ಪ್ರಾಧಿಕಾರ:ಇನ್ನು ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ರಾಜ್ಯಮಟ್ಟದ ಪ್ರಾಧಿಕಾರದ ಸದಸ್ಯರೊಬ್ಬರನ್ನು ಅಧ್ಯಕ್ಷರಾಗಿ, ಐದು ಉಪಾಧ್ಯಕ್ಷರು, 15 ಸದಸ್ಯರನ್ನು ನೇಮಿಸಬೇಕು.
ತಾಲ್ಲೂಕು ಮಟ್ಟದ ಅನುಷ್ಠಾನದ ಸಮಿತಿಗೆ ಜಿಲ್ಲಾ ಪ್ರಾಧಿಕಾರದ ಸದಸ್ಯರೊಬ್ಬರನ್ನು ಅಧ್ಯಕ್ಷರು ಹಾಗೂ 15 ಮಂದಿ ಸದಸ್ಯರನ್ನು ನೇಮಿಸಬೇಕು. ಎಲ್ಲಾ ಪ್ರಾಧಿಕಾರ ಹಾಗೂ ಸಮಿತಿಗಳಿಗೂ ಅಧಿಕಾರಿಯೊಬ್ಬರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಬೇಕು ಎಂದು ತಿಳಿಸಲಾಗಿದೆ.ಬಿಬಿಎಂಪಿ ಮಟ್ಟದ ಸಮಿತಿಗೆ ರಾಜ್ಯಮಟ್ಟದ ಪ್ರಾಧಿಕಾರದ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿ, 28 ಕ್ಷೇತ್ರಗಳಿಗೆ ತಲಾ ಒಬ್ಬರಂತೆ 28 ಮಂದಿ ಸದಸ್ಯರು, ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಬೇಕು ಎಂದು ಹೇಳಲಾಗಿದೆ-------ಪ್ರಾಧಿಕಾರ, ಸಮಿತಿಗಳ ರಚನೆಗೆ ಸಮರ್ಥನೆಪ್ರಾಧಿಕಾರ ಹಾಗೂ ಸಮಿತಿಗಳ ಅನಿವಾರ್ಯತೆಯನ್ನೂ ವಿವರಿಸಿದ್ದು, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ. ಈ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ರಾಜ್ಯ ಮಟ್ಟದ ಕಾರ್ಯ ವ್ಯವಸ್ಥೆಗೆ ಜಾರಿಗೆ ತರುವುದು ಅವಶ್ಯಕತೆ ಇರುವುದರಿಂದ ಅನುಷ್ಠಾನದ ನೀತಿ ಸುಧಾರಣೆ, ಅನುಷ್ಠಾನದ ವಿಧಾನಗಳಲ್ಲಿ ಸರಳೀಕರಣ ತರಲು ಹಾಗೂ ತಳಮಟ್ಟದಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಾಧಿಕಾರ ಹಾಗೂ ಸಮಿತಿಗಳನ್ನು ರಚನೆ ಮಾಡಿರುವುದಾಗಿ ಆದೇಶದಲ್ಲಿ ಸಮರ್ಥನೆ ನೀಡಲಾಗಿದೆ.