ಸಾರಾಂಶ
- ಮೋರ್ಚಾ ಸಂಚಾಲಕಿ ಎಚ್.ಸಿ. ಜಯಮ್ಮ ಹೇಳಿಕೆ । ಪಾಲಿಕೆ ಸದಸ್ಯ, ಇತರರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ
- ಭಾನುವಾರ ರಾತ್ರಿ ಪ್ರಚಾರ ವೇಳೆ ಅನವಶ್ಯಕವಾಗಿ ಕೆಣಕಿ, ಜಗಳಕ್ಕೆ ಬಂದ ಕಾಂಗ್ರೆಸ್ ಕೆಲ ಕಿಡಿಗೇಡಿಗಳು: ಅಸಮಾಧಾನ - - - ಕನ್ನಡಪ್ರಭ ವಾರ್ತೆ, ದಾವಣಗೆರೆಲೋಕಸಭೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹಾಗೂ ಮಹಿಳಾ ಕಾರ್ಯಕರ್ತೆಯರೊಂದಿಗೆ ನಗರದ ಎಸ್‌ಒಜಿ ಕಾಲನಿಯ ಪಾಲಿಕೆ ಸದಸ್ಯ ಸೇರಿದಂತೆ ಕಾಂಗ್ರೆಸ್ಸಿನ ಕೆಲವರು ಗೂಂಡಾ ವರ್ತನೆ ತೋರಿದ್ದಾರೆ. ಇಂತಹವರ ವಿರುದ್ಧ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಸಂಚಾಲಕಿ ಎಚ್.ಸಿ. ಜಯಮ್ಮ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್‌ಒಜಿ ಕಾಲನಿಯಲ್ಲಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಕಳೆದ ರಾತ್ರಿ ಕೆಲ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ 31ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಪಾಮೇನಹಳ್ಳಿ ನಾಗರಾಜ ಹಾಗೂ ಕೆಲ ರೌಡಿ ಶೀಟರ್‌ಗಳು ಅನಾಗರಿಕ ಪ್ರವೃತ್ತಿ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಅಣಕಿಸುವಂತೆ ವರ್ತಿಸಿದ್ದಾರೆ. ಮಹಿಳಾ ಅಭ್ಯರ್ಥಿ, ಕಾರ್ಯಕರ್ತರೆಂಬುದನ್ನೂ ಲೆಕ್ಕಿಸದೇ ದುರ್ವರ್ತನೆ ತೋರಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷದ ಅಲ್ಲಿನ ಪಾಲಿಕೆ ಸದಸ್ಯ, ಕಾರ್ಯಕರ್ತರ ವರ್ತನೆ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಮಹಿಳಾ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಸೌಜನ್ಯದಿಂದ ಬಿಜೆಪಿಗೆ ಮತ ನೀಡುವಂತೆ ಪ್ರಚಾರ ಮಾಡುತ್ತಿದ್ದರು. ಆದರೆ, ಅನಾವಶ್ಯಕವಾಗಿ ಕೆಣಕಿ, ಕಾಲು ಕೆದರಿ, ಜಗಳಕ್ಕೆ ಬಂದ ಕಾಂಗ್ರೆಸ್ ಕಿಡಿಗೇಡಿಗಳ ಬಗ್ಗೆ ಸ್ಥಳದಲ್ಲಿದ್ದ ಪೊಲೀಸರು ಮೌನಕ್ಕೆ ಶರಣಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ನಿನ್ನೆ ರಾತ್ರಿ ನಡೆದ ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ, ದೂರು ನೀಡಲಿದ್ದೇವೆ. ತಕ್ಷಣವೇ ಅಲ್ಲಿನ ಪಾಲಿಕೆ ಸದಸ್ಯನ ಬಗ್ಗೆ ರೌಡಿ ಶೀಟರ್ ಓಪನ್ ಮಾಡಿ, ಮಹಿಳೆಯರು, ಕಾರ್ಯಕರ್ತರ ವಿರುದ್ಧ ದೌರ್ಜನ್ಯ ತೋರಿದ ಪಾಲಿಕೆ ಸದಸ್ಯ, ರೌಡಿ ಶೀಟರ್‌ಗಳು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಿದ್ದೇವೆ ಎಂದು ಎಚ್.ಸಿ.ಜಯಮ್ಮ ಹೇಳಿದರು.ಎಸ್‌ಒಜಿ ಕಾಲನಿ ಕಲ್ಲೇಶಪ್ಪ ಮಾತನಾಡಿ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ, ಪ್ರಚಾರಕ್ಕೆ ಮುಂದಾದಾಗ ಗೂಂಡಾಗಳಂತೆ ಕೆಲವರು ವರ್ತಿಸಿದ್ದು ನಾಚಿಕೆಗೇಡಿನ ಸಂಗತಿ. 31ನೇ ವಾರ್ಡ್‌ನಲ್ಲಿ ಗೂಂಡಾಗಳ ವರ್ತನೆ ಮಿತಿ ಮೀರುತ್ತಿದೆ. ಬುದ್ಧಿ ಹೇಳಿದರೆ ರಸ್ತೆಯುದ್ದಕ್ಕೂ ಜೋರಾಗಿ ಅವಾಚ್ಯವಾಗಿ ನಿಂದನೆ, ಗಲಾಟೆ ಮಾಡುತ್ತಾರೆ. ಕಿಡಿಗೇಡಿಗಳಿಗೆ ಕಾಂಗ್ರೆಸ್ಸಿನ ನಾಯಕರು, ಜಿಲ್ಲಾ ಸಚಿವರು ಕರೆದು, ಬುದ್ಧಿ ಹೇಳಲಿ ಎಂದರು.
ಸ್ಥಳೀಯ ಮುಖಂಡರು, ಮಹಿಳೆಯರು ಮಾತನಾಡಿ, ನೀರು ಕೊಡಬೇಕಾಗಿರುವುದು ಪಾಲಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು. ನೀರು ಕೊಟ್ಟಿಲ್ಲವೆಂದು ಸಂಸದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಜ್ಞಾನವೂ ಇಲ್ಲದಂತೆ ನಿನ್ನೆ ವರ್ತಿಸಿರುವುದು ಯಾರಿಗೂ ಶೋಭೆ ತರುವುದಿಲ್ಲ. ಎಸ್‌ಒಜಿ ಕಾಲನಿಯಲ್ಲಿ ಹಗಲಿರುಳು ಇಂತಹ ರೌಡಿ ಶೀಟರ್‌ಗಳು, ಪುಂಡರ ಹಾವಳಿ ಮಿತಿ ಮೀರುತ್ತಿದೆ. ಈ ಭಾಗದ ಕಡೆ ಎಸ್ಪಿ ತೀವ್ರ ಗಮನ ಹರಿಸಬೇಕಾಗಿದೆ. ನಿನ್ನೆ ಪ್ರಚಾರಕ್ಕೆ ಬಂದಿದ್ದ ಗಾಯತ್ರಿ ಸಿದ್ದೇಶ್ವರ ಅವರು, ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ, ಬೆದರಿಸುವ, ಭಯ ಹುಟ್ಟುಹಾಕುವ ಕೆಲಸವಾಗಿದೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ ಎಂದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಚೇತನಾ ಶಿವಕುಮಾರ, ಸೀಮಾ ಸತೀಶ, ಎಸ್‌ಒಜಿ ಕಾಲನಿ ಚನ್ನವೀರಪ್ಪ, ಅಂಜಿನಪ್ಪ, ಅಂಗಡಿ ಶಂಕರಮ್ಮ, ರತ್ನಮ್ಮ, ಕುಮಾರಿ, ಚೇತನಾ ಶಿವಕುಮಾರ, ಮಂಜುನಾಥ, ಸತೀಶ, ಎಚ್.ಪಿ.ವಿಶ್ವಾಸ ಇತರರು ಇದ್ದರು.
- - -ಬಾಕ್ಸ್ ಪೊಲೀಸ್ ಇಲಾಖೆ ಕೈಗೊಂಬೆ ಆಗದಿರಲಿ ಎಸ್‌ಒಜಿ ಕಾಲನಿಯಲ್ಲಿ ರೌಡಿಗಳು, ಇಂತಹವರಿಂದಾಗಿ ತೀವ್ರ ಭಯದ ವಾತಾವರಣ ಇದೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು. ಪೊಲೀಸ್ ಇಲಾಖೆ ಆಳುವ ಸರ್ಕಾರ, ಆಳುವವರ ಕೈಗೊಂಬೆಯಂತೆ ವರ್ತಿಸಬಾರದು. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಕಾರ್ಯಕರ್ತರಿಗೆ ಬೆದರಿಸಿ, ಹೆದರಿಸಿ, ಭಯ ಹುಟ್ಟು ಹಾಕಿದವರ ಮೇಲೆ ಮೊದಲು ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ
- ಸ್ಥಳೀಯ ಮಹಿಳೆಯರು, ಎಸ್‌ಒಜಿ ಕಾಲನಿ- - - -8ಕೆಡಿವಿಜಿ:
ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಮಹಿಳಾ ಮೋರ್ಚಾದ ಎಚ್.ಸಿ. ಜಯಮ್ಮ, ಎಸ್‌ಒಜಿ ಕಾಲನಿ ಕಲ್ಲೇಶಪ್ಪ ಇತರರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.