2 ಲಕ್ಷಕ್ಕೂ ಅಧಿಕ ಮತ ಅಂತರದಿಂದ ಗಾಯತ್ರಿ ಗೆಲ್ಲಿಸುವ ಗುರಿ

| Published : Apr 04 2024, 01:02 AM IST

2 ಲಕ್ಷಕ್ಕೂ ಅಧಿಕ ಮತ ಅಂತರದಿಂದ ಗಾಯತ್ರಿ ಗೆಲ್ಲಿಸುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ-ಜೆಡಿಎಸ್ ಲೋಕಸಭೆ ಚುನಾವಣೆಗೆ ಮಾದರಿ ಹೊಂದಾಣಿಕೆ ಒಳ್ಳೆಯ ರಾಜಕಾರಣ ಆರಂಭಿಸಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕನಿಷ್ಠ 2 ಲಕ್ಷ ಮತಗಳಿಗೂ ಅಧಿಕ ಅಂತರದಲ್ಲಿ ಗೆಲ್ಲಿಸುವುದೇ ನಮ್ಮೆಲ್ಲರ ಗುರಿಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಒಳ್ಳೆಯ ರಾಜಕಾರಣ: ರವೀಂದ್ರನಾಥ ಶ್ಲಾಘನೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಬಿಜೆಪಿ-ಜೆಡಿಎಸ್ ಲೋಕಸಭೆ ಚುನಾವಣೆಗೆ ಮಾದರಿ ಹೊಂದಾಣಿಕೆ ಒಳ್ಳೆಯ ರಾಜಕಾರಣ ಆರಂಭಿಸಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕನಿಷ್ಠ 2 ಲಕ್ಷ ಮತಗಳಿಗೂ ಅಧಿಕ ಅಂತರದಲ್ಲಿ ಗೆಲ್ಲಿಸುವುದೇ ನಮ್ಮೆಲ್ಲರ ಗುರಿಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಹೇಳಿದರು.

ನಗರದ ಬಿಜೆಪಿ ಲೋಕಸಭಾ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆಯೇನೂ ಹೊಸದಲ್ಲ. 1998-99ರಲ್ಲೂ ನಾವು ಇಲ್ಲಿ ಹೊಂದಾಣಿಕೆ ಮಾಡಿಕೊಂಡು, ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ನಡೆಸಿದ್ದೇವೆ ಎಂದರು.

ಲೋಕಸಭೆ ಚುನಾವಣೆಗೆ ಜೆಡಿಎಸ್ ಮಿತ್ರಪಕ್ಷವಾಗಿ ನಮ್ಮೊಂದಿಗೆ ಇದೆ. ಉಭಯ ಪಕ್ಷಗಳ ನಾವೆಲ್ಲರೂ ಒಟ್ಟಾಗಿದ್ದೇವೆ. ಮಾದರಿಯಾಗಿ ಕೆಲಸ ಮಾಡಿ, ತೋರಿಸುತ್ತೇವೆ. ಮುಂದೆಯೂ ಉತ್ತಮವಾಗಿ ಕೆಲಸ ಮಾಡಿ, ಅಭ್ಯರ್ಥಿಯನ್ನು ಗೆಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಹಿರಿಯರು, ಯಜಮಾನರಾದ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ನಮಗೆ ಗೌರವವಿದೆ. ಸ್ವತಃ ಹೇಳಿಕೆಯನ್ನು ನೀಡಿ, ತಾವು ಹಾಗೆ ಹೇಳಿಕೆ ನೀಡಿಲ್ಲವೆಂದು, ತಮ್ಮ ಹೇಳಿಕೆ ತಿರುಚಲಾಗಿದೆಯೆಂದು ಚುನಾವಣಾಧಿಕಾರಿಗಳ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಬೇಕೋ ಅಥವಾ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಬೇಕೋ ಎಂಬುದನ್ನು ತೀರ್ಮಾನಿಸುತ್ತಾರೆ. ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ನರೇಂದ್ರ ಮೋದಿ ಬಲಿಷ್ಠ ಪ್ರಧಾನಿ ಎಂದು ಹೇಳಿದ್ದಾರೆ ಎಂದರು.

19ರಂದು ನಾಮಪತ್ರ ಸಲ್ಲಿಕೆ:

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಏ.19ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಮಧ್ಯಾಹ್ನ ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಿ.ವೈ. ವಿಜಯೇಂದ್ರ ಸೇರಿದಂತೆ ಉಭಯ ಪಕ್ಷಗಳ ನಾಯಕರು ಸಹ ರೋಡ್ ಶೋಗೆ ಆಗಮಿಸಲಿದ್ದಾರೆ. ಈ ಬಗ್ಗೆ ಇನ್ನೂ ಚರ್ಚೆ ನಡೆದಿದ್ದು, ಶೀಘ್ರವೇ ಸಮಯ ಹಾಗೂ ಬೃಹತ್ ಮೆರವಣಿಗೆಗೆ ಆಗಮಿಸುವ ನಾಯಕರ ವಿವರ ನೀಡಲಾಗುವುದು ಎಂದು ಅವರು ತಿಳಿಸಿದರು.

ಹರಿಹರ ಶಾಸಕ ಬಿ.ಪಿ.ಹರೀಶ ಗೌಡ ಮಾತನಾಡಿ, ಎನ್‌ಡಿಎ ಜೊತೆ ಕೈ ಜೋಡಿಸುವ ಮೂಲಕ ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಜೆಡಿಎಸ್ ವರಿಷ್ಠರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿಗೆ ಬೆಂಬಲಿಸಿದ್ದಾರೆ. ರಾಜ್ಯಮಟ್ಟದ ಸಮನ್ವಯ ಸಮಿತಿ ಸಭೆ ಮಾಡಿದ್ದು, ಜಿಲ್ಲೆಯ ಜೆಡಿಎಸ್‌ನ ಹಿರಿಯ ಶಾಸಕರು, ಮುಖಂಡರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಇದು ನಮ್ಮ ಪಕ್ಷದ ಅಭ್ಯರ್ಥಿಗೆ ಮತ್ತಷ್ಟು ಬಲ ತಂದಿದೆ ಎಂದು ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಇಡೀ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೇಂದ್ರದಿಂದ ಅನೇಕ ಯೋಜನೆ, ಕಾರ್ಯಕ್ರಮ ತಂದಿದ್ದಾರೆ. ಹರಿಹರದ 85 ಗ್ರಾಮಗಳಿಗೆ ಜಲಜೀವನ್ ಮಿಷನ್ ತಂದಿದ್ದಾರೆ. ಇಡೀ ರಾಜ್ಯವೇ ಬರದಿಂದ ತತ್ತರಿಸಿದೆ. ಕುಡಿಯುವ ನೀರಿಗೂ ಜನ ಗುಳೆ ಹೋಗುವ ಸ್ಥಿತಿ ಇದೆ. ಭದ್ರಾ ನಾಲೆ ಮೂಲಕ ಜಮೀನಿಗೆ ನೀರೊದಗಿಸುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ. ತೋಟಗಳು, ಬೆಳೆಗಳ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಭದ್ರಾ ನೀರು ಕೊಡಿಸುವ ಬಗ್ಗೆ ಜಿಲ್ಲಾ ಸಚಿವರು ಗಮನಹರಿಸುತ್ತಿಲ್ಲ. ಜಿಲ್ಲಾಡಳಿತವೂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

- - - ಕೋಟ್‌

ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿಯೇ ಇಲ್ಲವಾಗಿದೆ. ನಮ್ಮ ಧರ್ಮ ಪರಂಪರೆಯ ವಿರುದ್ಧವಾಗಿ ಮುಖ್ಯಮಂತ್ರಿಗಳು ಕುರಿ, ಕೋಳಿ ತಿಂದು, ಧರ್ಮಸ್ಥಳ ಸೇರಿದಂತೆ ದೇವರ ದರ್ಶನ ಮಾಡಿದ್ದಕ್ಕೆ ಬರ ಉಂಟಾಗಿದೆಯೆಂದು ನಾಡಿನ ಜನ ಹೇಳುತ್ತಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಧಿಕ್ಕರಿಸಿದ ಮುಖ್ಯಮಂತ್ರಿಯಿಂದಾಗಿ ನಾಡು ಸಂಕಷ್ಟಕ್ಕೀಡಾಗಿದೆ ಎಂಬ ಜನರ ಮಾತುಗಳಲ್ಲಿ ಅರ್ಥವೂ ಇದೆ

- ಬಿ.ಪಿ.ಹರೀಶ ಗೌಡ, ಬಿಜೆಪಿ ಶಾಸಕ, ಹರಿಹರ

- - -