ಇಂದು ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಪರೀಕ್ಷೆ:ಪರೀಕ್ಷೆ ಬರೆಯಲಿರುವ ೫,೭೧೮ ಮಂದಿ ಅಭ್ಯರ್ಥಿಗಳು

| Published : Dec 29 2024, 01:16 AM IST

ಇಂದು ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಪರೀಕ್ಷೆ:ಪರೀಕ್ಷೆ ಬರೆಯಲಿರುವ ೫,೭೧೮ ಮಂದಿ ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಿನ ಅವಧಿಯ ಪರೀಕ್ಷೆ ಬೆಳಗ್ಗೆ ೧೦ರಿಂದ ೧೨ರವರೆಗೆ, ಮಧ್ಯಾಹ್ನದ ಅವಧಿಯ ಪರೀಕ್ಷೆ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನಡೆಯಲಿದ್ದು, ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ನಗರದ ೧೪ ಕೇಂದ್ರಗಳಲ್ಲಿ ಡಿ.೨೯ರಂದು ನಡೆಯುವ ೨೦೨೩- ೨೪ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯನ್ನು ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ನಡೆಸಲು ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪರೀಕ್ಷಾ ಮುಖ್ಯ ಮೇಲ್ವಿಚಾರಕರೂ ಆಗಿರುವ ಡಾ.ಎಂ.ಆರ್.ರವಿ ಸೂಚನೆ ನೀಡಿದರು.

ಪರೀಕ್ಷೆಗೆ ಮುನ್ನಾದಿನ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾಹಿತಿ ನೀಡಿ, ಪರೀಕ್ಷೆಗೆ ಒಟ್ಟು ೫,೭೧೮ ಮಂದಿ ಹಾಜರಾಗಲಿದ್ದು, ಎಲ್ಲಾ ೧೪ ಕೇಂದ್ರಗಳು ನಗರದಲ್ಲೇ ಇವೆ ಎಂದು ತಿಳಿಸಿದರು.

ಬೆಳಗಿನ ಅವಧಿಯ ಪರೀಕ್ಷೆ ಬೆಳಗ್ಗೆ ೧೦ರಿಂದ ೧೨ರವರೆಗೆ, ಮಧ್ಯಾಹ್ನದ ಅವಧಿಯ ಪರೀಕ್ಷೆ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನಡೆಯಲಿದ್ದು, ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಡಿಸಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ:

ಪ್ರಶ್ನೆಪತ್ರಿಕೆಗಳನ್ನು ಖಜಾನೆಯಲ್ಲಿ ಸಂರಕ್ಷಣೆ, ವಿತರಣೆ ಕುರಿತಂತೆ ನಿಗಾವಹಿಸಲು ಅಪರ ಜಿಲ್ಲಾಧಿಕಾರಿ ಮಂಗಳಾ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಪರೀಕ್ಷಾ ನೋಡಲ್ ಅಧಿಕಾರಿಯಾಗಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಂಕರೇಗೌಡ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿಕೇಂದ್ರಕ್ಕೂ ಓರ್ವ ಮೇಲ್ವಿಚಾರಕರಿದ್ದು, ತಲಾ ಒಬ್ಬರಂತೆ ಸ್ಥಳೀಯ ನಿರೀಕ್ಷಣಾಧಿಕಾರಿಯನ್ನು ನೇಮಿಸಲಾಗಿದೆ. ಪ್ರತಿ ೪ ಕೇಂದ್ರಗಳಿಗೆ ಒಬ್ಬರು ವೀಕ್ಷಕರು, ತಲಾ ೩ ಕೇಂದ್ರಗಳಿಗೆ ಒಬ್ಬರು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಶ್ನೆಪತ್ರಿಕೆ ಸಾಗಣೆ ಸಂದರ್ಭದಲ್ಲಿ ಪ್ರತಿ ಮಾರ್ಗಾಧಿಕಾರಿ ಜತೆ ಐದು ಮಂದಿ ಪೊಲೀಸರ ಬೆಂಗಾವಲು ಒದಗಿಸಲಾಗಿದೆ ಎಂದು ತಿಳಿಸಿದರು.

ಇದಲ್ಲದೇ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಓರ್ವ ಕಂದಾಯ ನಿರೀಕ್ಷಕರನ್ನು ಜಿಲ್ಲಾಡಳಿತದಿಂದ ನೇಮಿಸಲಾಗಿದ್ದು, ಕೇಂದ್ರಗಳಲ್ಲಿ ಕುಡಿಯುವ ನೀರು, ಗಾಳಿ,ಬೆಳಕು, ಡೆಸ್ಕ್‌ಗಳು ಸೇರಿದಂತೆ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಿದೆ.

ಬಿಗಿ ಬಂದೋಬಸ್ತ್, ನಿಷೇಧಾಜ್ಞೆ ಜಾರಿ:

ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಆಭರಣಗಳನ್ನು ಧರಿಸಲು ನಿಷೇಧವಿದೆ, ಪೂರ್ಣ ತೋಳಿನ ಶರ್ಟ್, ಶೂ ಹಾಕಿದ್ದರೂ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗುವುದು.

ಕೇಂದ್ರದ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲು ಸೂಚಿಸಲಾಗಿದೆ.

ಪರೀಕ್ಷೆಗೆ ಸಿದ್ಧಗೊಂಡ ೧೪ ಕೇಂದ್ರಗಳು:

ಡಿಡಿಪಿಐ ಕೃಷ್ಣಮೂರ್ತಿ ಕೇಂದ್ರಗಳ ಕುರಿತು ಮಾಹಿತಿ ನೀಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು, ನೂತನ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಮಹಿಳಾ ಪದವಿ ಕಾಲೇಜು,ಮಹಿಳಾ ಸಮಾಜ ಪಿಯು ಕಾಲೇಜು, ಸುಭಾಷ್ ಪ್ರೌಢಶಾಲೆ, ಎಸ್‌ಡಿಸಿ ಕಾಲೇಜು, ಎಸ್‌ಡಿಸಿ ಇಂಡಿಪೆಂಡೆಂಟ್ ಪಿಯು ಕಾಲೇಜು, ಚಿನ್ಮಯ ವಿದ್ಯಾಲಯ, ಗೋಕುಲ ಕಾಲೇಜು, ಮಹಿಳಾ ಸಮಾಜ ಪ್ರೌಢಶಾಲೆ, ಮದರ್‌ ತೆರೇಸಾ ಇಂಗ್ಲಿಷ್ ಶಾಲೆ, ಅಲ್‌ಅಮೀನ್ ಡಾ.ಮುಮ್ತಾಜ್ ಅಹಮದ್ ಖಾನ್ ಪದವಿ ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ.

ಪರೀಕ್ಷಾ ಕಾರ್ಯಗಳಲ್ಲಿ ಮಾರ್ಗಾಧಿಕಾರಿಗಳಾಗಿ ಬಿಇಒಗಳಾದ ಉಮಾ, ಚಂದ್ರಕಲಾ, ಮುನಿಲಕ್ಷ್ಮಯ್ಯ, ಗಂಗರಾಮಯ್ಯ, ಶಿಕ್ಷಣಾಧಿಕಾರಿ ವೀಣಾ ಅವರನ್ನು ನೇಮಿಸಲಾಗಿದೆ.

ಪರೀಕ್ಷಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಅಪರ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ,ತಹಸೀಲ್ದಾರ್ ನಯನಾ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ, ನಗರದ ಮದರ್‌ತೆರೇಸಾ, ಸುಭಾಷ್ ಶಾಲೆ ಮತ್ತಿತರ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಕ್ರಮವಹಿಸಲು ಸೂಚಿಸಿದರು.

ನೋಡಲ್ ಅಧಿಕಾರಿ ಶಂಕರೇಗೌಡ ಮಾಹಿತಿ ನೀಡಿ, ಕೇಂದ್ರಗಳ ಮೇಲ್ವಿಚಾರಕರಾಗಿ ಗಾಯತ್ರಿ, ಶಶಿವಧನ, ರಾಧಮ್ಮ, ನಾಗರಾಜ್ ಸೇರಿದಂತೆ ವಿವಿಧ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಉಪಪ್ರಾಂಶುಪಾಲರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.