ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯಲ್ಲಿ ಭೂ ಸ್ವಾಧೀನದ ಪರಿಹಾರ ಕಬಳಿಸಲು ವ್ಯವಸ್ಥಿತವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಲ್ಲಿ ಸ್ವತಃ ಜಿಬಿಡಿಎವೇ ಭಾಗಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಆರೋಪಿಸಿದರು
ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯಲ್ಲಿ ಭೂ ಸ್ವಾಧೀನದ ಪರಿಹಾರ ಕಬಳಿಸಲು ವ್ಯವಸ್ಥಿತವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಲ್ಲಿ ಸ್ವತಃ ಜಿಬಿಡಿಎವೇ ಭಾಗಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರದ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಕೆಲ ರಿಯಲ್ ಎಸ್ಟೇಟ್ ದಲ್ಲಾಳಿಗಳು ಸೇರಿ ನಕಲಿ ದಾಖಲೆ ಸೃಷ್ಟಿಸಿ ಭೂ ಪರಿಹಾರ ದೋಚುವ ಕೃತ್ಯ ನಡೆಸಿದ್ದಾರೆ. ರೈತರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ತಮ್ಮ ಅಧಿಕಾರಿ ಮೂಲಕವೇ ಬಿಡದಿ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದಾರೆ ಎಂದು ದೂರಿದರು.ಈಗಾಗಲೇ ನಕಲಿ ದಾಖಲೆ ಸಲ್ಲಿಸಿದವರಿಗೆ ಭೂ ಪರಿಹಾರ ಕೂಡ ಪಾವತಿಸಿರುವ ಉದಾಹರಣೆಗಳಿವೆ. ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿರುವ ರೈತರನ್ನು ಬೆದರಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಹಾರ ದೋಚುವ ಕೃತ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಕೋರ್ಟ್ ಉಸ್ತುವಾರಿಯಲ್ಲಿ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವಹಿಸಬೇಕು ಎಂದು ಆಗ್ರಹಿಸಿದರು.
ಬಿಡದಿಯತ್ತ ಸುಳಿಯದ ಸಮಿತಿ: ಟೌನ್‌ಶಿಪ್ ಯೋಜನೆ ಕುರಿತು ಜನರ ಅಭಿಪ್ರಾಯ ಪರಿಶೀಲಿಸಿ ವರದಿ ಸಲ್ಲಿಸಲು ಉತ್ತರಾಖಂಡ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆ.9ರಂದೇ ಸಮಿತಿ ರಚಿಸಿದ್ದಾರೆ. ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ಧಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೆ ಒಳಪಡಿಸಿ 30 ದಿನದೊಳಗೆ ಸಮಿತಿ ತನ್ನ ಶಿಫಾರಸು ಒಳಗೊಂಡ ವರದಿ ನೀಡಲಿದೆ ಎಂದು ತಿಳಿಸಿದ್ದರು. ಆದರೆ, ಒಂದು ತಿಂಗಳಾಗುತ್ತಾ ಬಂದರೂ ಸಮಿತಿ ಯೋಜನಾ ಪ್ರದೇಶಕ್ಕೆ ಬಂದಿಲ್ಲ. ಜನರ ಅಭಿಪ್ರಾಯ ಆಲಿಸಿಲ್ಲ. ಅದರ ಕಚೇರಿ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಸಮಿತಿ ಕೂಡಲೇ ತನ್ನ ಕೆಲಸ ಆರಂಭಿಸಿ, ಪಾರದರ್ಶಕವಾಗಿ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಯಶವಂತ್ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆಣೆಗೆರೆ ಮಲ್ಲಯ್ಯ, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ಅರಳಾಳುಸಂದ್ರ ಅಶ್ವಥ್, ನಾಗರಾಜು, ಮಂಜುನಾಥ್, ರವೀಂದ್ರ ರೆಡ್ಡಿ, ರೈತ ಮುಖಂಡ ಕುಮಾರಸ್ವಾಮಿ ಇದ್ದರು.
ಕಚೇರಿಗೆ ಮುತ್ತಿಗೆ ಹಾಕುತ್ತೇವೆ:ಭೂ ಸ್ವಾಧೀನದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆಯುವ ಜಾಲವು ಯೋಜನಾ ಪ್ರದೇಶದಲ್ಲಿ ಸಕ್ರಿಯವಾಗಿದೆ. ಇದಕ್ಕಾಗಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜು ಗಾಣಕಲ್ಲು ಅವರು ಪ್ರತಿ ಗ್ರಾಮದಲ್ಲಿ ತಮ್ಮ ತಂಡವನ್ನು ಬಿಟ್ಟಿದ್ದಾರೆ. ಅರಳಾಳುಸಂದ್ರ ಗ್ರಾಮದಲ್ಲಿ ಯಾರದ್ದೊ ಜಮೀನಿಗೆ ಇನ್ಯಾರೊ ಪರಿಹಾರ ಪಡೆದಿದ್ದಾರೆ. ಪ್ರಾಧಿಕಾರವು ಇದುವರೆಗೆ ಯಾವ್ಯಾವ ಗ್ರಾಮಗಳಲ್ಲಿ ಎಷ್ಟು ಭೂಮಿ ಸ್ವಾಧೀನಪಡಿಸಿಕೊಂಡಿದೆ. ಸರ್ವೆ ನಂಬರ್‌ವಾರು ಯಾರಿಗೆ ಎಷ್ಟು ಪರಿಹಾರ ಪಾವತಿಸಿದೆ. ಯಾವ್ಯಾವ ಸರ್ವೆ ನಂಬರ್‌ಗಳಿಗೆ ಪಾಲುದಾರಿಕೆ ಪ್ರಮಾಣಪತ್ರ ವಿತರಿಸಿದೆ ಎಂಬ ಮಾಹಿತಿ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಪ್ರಾಧಿಕಾರದ ಕಚೇರಿಗೆ ರೈತರು ಮುತ್ತಿಗೆ ಹಾಕುತ್ತೇವೆ.
- ಮಂಡಲಹಳ್ಳಿ ನಾಗರಾಜ್ , ಖಜಾಂಚಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ರೈತರ ಭೂ ಹಿತರಕ್ಷಣಾ ಸಮಿತಿ.9ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.