ಕನ್ನಡಪ್ರಭ ವಾರ್ತೆ ಮಡಿಕೇರಿ

ಭಗತ್‌ಸಿಂಗ್ ಯುವಕ ಸಂಘ ಮೇ ತಿಂಗಳಲ್ಲಿ ನಡೆಸಲಿರುವ 6ನೇ ಆವೃತ್ತಿಯ ಜಿಸಿಎಲ್ ಕ್ರಿಕೆಟ್ ಪಂದ್ಯಾಟದ ಬಿಡ್ಡಿಂಗ್ ಕಾರ್ಯಕ್ರಮ ನಡೆಯಿತು. ಗೋಣಿಕೊಪ್ಪ ಸ್ವಾತಂತ್ಯ್ರ ಹೋರಾಟಗಾರರ ಭವನದಲ್ಲಿ ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಿಂಗಿ ಅಧ್ಯಕ್ಷತೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಭಗತ್‌ಸಿಂಗ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ತನ್ನದೇ ಆದ ಹೋರಾಟದ ಮೂಲಕ ಗಮನ ಸೆಳೆದಿದ್ದಾರೆ. ಕೆಚ್ಚೆದೆಯ ವೀರ, ಹೋರಾಟಗಾರರ ಹೆಸರಿನಲ್ಲಿ ಸಂಘ ಸ್ಥಾಪಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಸ್ವಾತಂತ್ರ‍್ಯ ಹೋರಾಟಗಾರರ ಭವನ ಸಂಚಾಲಕ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಮಾತನಾಡಿ, ದೇಶ ಸೇವೆ ಮಾಡಿರುವ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಸಂಘ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಚಾರ ಎಂದರು.

ಸಾಹಿತಿ, ಕವಿ, ಜಗದೀಶ್ ಜೋಡುಬೀಟಿ ಮಾತನಾಡಿ, ಕ್ರೀಡೆಗಿಂತ ದೊಡ್ಡ ಆಧ್ಯಾತ್ಮ ಮತ್ತು ಧ್ಯಾನ ಮತ್ತೊಂದಿಲ್ಲ. ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಬಲಿಷ್ಠ ಭಾರತವನ್ನು ಯುವಕರು ಕಟ್ಟಬೇಕಾಗಿದೆ.


ಭಗತ್‌ಸಿಂಗ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಿಂಗಿ ಅಧ್ಯಕ್ಷತೆಯಲ್ಲಿ ಮಾತನಾಡಿ, ಮೇ 14, 15 , 16 ಮತ್ತು 17 ರಂದು ಗೋಣಿಕೊಪ್ಪಲು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟ ಆರನೇ ವರ್ಷದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನವಾಗಿ 1,11111 ರು.ಪಾಯಿಗಳನ್ನು ಮತ್ತು ದ್ವಿತೀಯ ಬಹುಮಾನವಾಗಿ 50555, ತೃತೀಯ ಬಹುಮಾನ 6666, ಮತ್ತು ನಾಲ್ಕನೇ ಬಹುಮಾನವನ್ನ 3333 ವಿಜೇತ ತಂಡಗಳಿಗೆ ನೀಡಲಾಗುತ್ತಿದೆ.

ಸುಮಾರು 16 ತಂಡಗಳು, ಇನ್ನೂರಕ್ಕು ಹೆಚ್ಚು ಕ್ರೀಡಾಪಟುಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಪತ್ರಕರ್ತ ವಿ.ವಿ ಅರುಣ್ ಕುಮಾರ್, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕಿ ಜಯಶ್ರೀ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಮಹಿಳಾ ಸಾದಕಿ ಕುಸುಮ ಪಡಿಕಲ್, ಸಮಾಜ ಸೇವಕ ಪೂವಯ್ಯ, ಮರ್ಚೆಂಟ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕಾರ್ತಿಕ್ ಮತ್ತು ಫುಟ್ಬಾಲ್ ಆಟಗಾರ ದೈವಿಕ್ ಸೋಮಯ್ಯ ಇವರನ್ನು ಸನ್ಮಾನಿಸಲಾಯಿತು.

ಭಗತ್ ಸಿಂಗ್ ಯುವಕ ಸಂಘದ ಕ್ರೀಡಾ ಸಂಚಾಲಕ ಸಂತೋಷ್ ಪಿಟ್ಟೆ, ಮರ್ಚೆಂಟ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್, ಸರ್ವದೈವತ ಶಾಲೆಯ ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾಬೊಪ್ಪಣ್ಣ ಮತ್ತಿತರರು ಇದ್ದರು.