ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಮುಂಬರುವ ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಜೊತೆಗೆ ಸರ್ಕಾರದ ಜನಪರ ಯೋಜನೆಗಳು, ಗ್ಯಾರಂಟಿಗಳು, ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಇಂದಿನಿಂದಲೇ ಪಕ್ಷದ ಚಟುವಟಿಕೆಗಳಲ್ಲಿ ಕಾರ್ಯ ಪ್ರವೃತ್ತರಾಗಬೇಕು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಅನ್ನು ಸಂಘಟಿಸಿ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧರಾಗುವಂತೆ ಶಾಸಕ ಕೆ.ಎಂ.ಉದಯ್ ಕಾರ್ಯಕರ್ತರಿಗೆ ಕರೆ ನೀಡಿದರು.ಅಣ್ಣೂರು ಮತ್ತು ಕೆ.ಎಂ.ದೊಡ್ಡಿ ಗ್ರಾಮಗಳಲ್ಲಿ ನಡೆದ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡುವ ನಿಟ್ಟಿನಲ್ಲಿ ತಳ ಮಟ್ಟದಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಪ್ರತಿ ಗ್ರಾಮದಲ್ಲಿ 20 ಸದಸ್ಯರ ಬೂತ್ ಸಮಿತಿ ಹಾಗೂ 3 ರಿಂದ 4 ಪ್ರಮುಖ ಮುಖಂಡರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸದಸ್ಯರು ಮುಂಚೂಣಿಯಲ್ಲಿದ್ದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಮುಂಬರುವ ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಜೊತೆಗೆ ಸರ್ಕಾರದ ಜನಪರ ಯೋಜನೆಗಳು, ಗ್ಯಾರಂಟಿಗಳು, ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಇಂದಿನಿಂದಲೇ ಪಕ್ಷದ ಚಟುವಟಿಕೆಗಳಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಸುಮಾರು ಎರಡು ಸಾವಿರ ಕೋಟಿ ರು.ಗಳಿಗೂ ಅಧಿಕ ಅನುದಾನ ತಂದು ರಾಜ್ಯದಲ್ಲೇ ಯಾವೊಬ್ಬ ಶಾಸಕರು ಮಾಡದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಶಾಸಕ ಕೆ.ಎಂ.ಉದಯ್ ಅವರ ಕೈ ಬಲಪಡಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕೆಂದರು.ಈ ವೇಳೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು. ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರವಿ, ಮಾಜಿ ಸದಸ್ಯ ಚಂದ್ರಶೇಖರ್, ಮುಖಂಡರಾದ ಆನಂದ್, ಮನೋಹರ್, ಪಿಣ್ಣ ಸತೀಶ್, ರಾಘವೇಂದ್ರ ಕಾರ್ಕಳ್ಳಿ ಸಚ್ಚಿನ್, ಕೆ.ಎಂ.ದೊಡ್ಡಿ ಮುಖಂಡರಾದ ಶ್ರೀನಿವಾಸ್, ಪುಟ್ಟರಾಮು, ಪೂಜಾರಿ ಮಹೇಶ್, ಸಿದ್ದರಾಜು ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಹಾರ, ತುರಾಯಿ, ಪಟಾಕಿ ತರಬೇಡಿ:ಕ್ಷೇತ್ರದ ಜನರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಇನ್ನು ಮುಂದೆ ನಾನು ಭಾಗವಹಿಸುವ ಯಾವುದೇ ಸಭೆ, ಸಮಾರಂಭಗಳು, ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ಹಾಕದಂತೆ ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.
ಅಲ್ಲದೇ, ತಮ್ಮನ್ನು ಭೇಟಿಯಾಗಲು ಬರುವವರು ಕೂಡ ಹಾರಗಳನ್ನು ತರಬಾರದು, ಗ್ರಾಮಗಳಿಗೆ ಭೇಟಿ ನೀಡಿದಾಗ ಪಟಾಕಿಗಳನ್ನು ಸಿಡಿಸುವುದನ್ನು ಮಾಡಬಾರದು. ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಆದ್ದರಿಂದ ನನ್ನ ಮನವಿಗೆ ಸ್ಪಂದಿಸಬೇಕು ಎಂದು ಶಾಸಕರು ಕೋರಿದರು.