ರಾಮನಗರ: ಪ್ರಧಾನಿ ನರೇಂದ್ರ ಮೋದಿರವರು ಕಗ್ಗಲೀಪುರದ ತಾತಗುಣಿ ಬಳಿಯ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಸಾಗಿ ಬರುವ ಮಾರ್ಗದ ಸ್ವಲ್ಪ ದೂರದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು

ರಾಮನಗರ: ಪ್ರಧಾನಿ ನರೇಂದ್ರ ಮೋದಿರವರು ಕಗ್ಗಲೀಪುರದ ತಾತಗುಣಿ ಬಳಿಯ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಸಾಗಿ ಬರುವ ಮಾರ್ಗದ ಸ್ವಲ್ಪ ದೂರದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು.

ತಾತಗುಣಿ ಬಳಿಯ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿಯವರ 70ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿರವರು ಪಾಲ್ಗೊಳ್ಳುವುದು ನಿಗದಿಯಾಗಿತ್ತು.

ಪ್ರಧಾನಿಗಳು ಬೆಳಗ್ಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಶ್ರಮಕ್ಕೆ ಬರುವ ಸುಮಾರು ಒಂದೂವರೆ ಗಂಟೆಗೂ ಮೊದಲು ಆರ್ಟ್ ಆಫ್ ಲಿವಿಂಗ್ ಕಡೆ ತೆರಳುವ ಮಾರ್ಗದ ಸಮೀಪದಲ್ಲಿಯೇ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ನೈಸ್ ರಸ್ತೆ ಜಂಕ್ಷನ್‌ನಿಂದ ಸುಮಾರು ಒಂದು ಕಿಲೋಮೀಟರ್ ಹಾಗೂ ರಸ್ತೆಯಿಂದ 20-25 ಅಡಿ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಒಂದನ್ನು ಕರ್ತವ್ಯ ನಿರತ ಕಾನ್‌ ಸ್ಟೆಬಲ್ ಗಮನಿಸಿದ್ದಾರೆ. ಆ ಪ್ಯಾಕೆಟ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಇರುವುದು ಕಂಡುಬಂದಿದೆ.

ತಕ್ಷಣವೇ ಆ್ಯಂಟಿ ಸಬೊಟೇಜ್ ಚೆಕ್ (ಎಎಸ್ ಸಿ) ತಂಡ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ ಜಿಲೆಟಿನ್ ಕಡ್ಡಿಗಳನ್ನು ತೆರವುಗೊಳಿಸಿ ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಂಡರು. ಸಾಮಾನ್ಯವಾಗಿ ಕಲ್ಲು ಕ್ವಾರಿ ಸ್ಫೋಟಕ್ಕೆ ಬಳಸುವ ಜಿಲೆಟಿನ್ ಕಡ್ಡಿಗಳು ಇದಾಗಿವೆ ಎಂದು ಗೊತ್ತಾಗಿದೆ.

ಈ ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಜಿಲೆಟಿನ್ ಕಡ್ಡಿಗಳನ್ನು ಇರಿಸಿದ್ದ ಆರೋಪದ ಮೇಲೆ ಪೊಲೀಸರು ಕೋರಮಂಗಲದ ಸಂಶಯಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿರವರು ಮೊದಲು ಎಚ್ ಎಎಲ್ ನಲ್ಲಿ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಬಳಿಕ ಆರ್ಟ್ ಆಫ್ ಲಿವಿಂಗ್ ನ 45ನೇ ವಾರ್ಷಿಕೋತ್ಸವ ಹಾಗೂ ಧ್ಯಾನಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ತರುವಾಯ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದರು.

ಬಾಕ್ಸ್‌.................

ಜಿಲೆಟಿನ್ ಕಟ್ಟಿ ಪತ್ತೆ ಪ್ರಕರಣ ತನಿಖೆಗಾಗಿ 4 ತಂಡಗಳ ರಚನೆ

ರಾಮನಗರ: ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆಯಾದ ಪ್ರಕರಣದ ತನಿಖೆಗಾಗಿ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ.

ಈ ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ತನಿಖೆಗಾಗಿ 4 ತಂಡಗಳನ್ನು ರಚಿಸಲಾಗಿದೆ. ಜಿಲೆಟಿನ್ ಕಟ್ಟಿ ಹೇಗೆ ಬಂತು, ಯಾರು ತಂದು ಹಾಕಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಕಲ್ಲು ಕ್ವಾರಿಗಳು, ಗೋದಾಮುಗಳಲ್ಲಿಯೂ ಪರಿಶೀಲನೆ ನಡೆದಿದೆ.

ಕೋಟ್ .........

ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ಇದನ್ನು ಬೆಳಗ್ಗೆ ಕೋರಮಂಗಲ ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ತಿಳಿಸಿದ್ದ. ಜಿಲೆಟಿನ್ ಕಡ್ಡಿಗಳು ಅಲ್ಲಿಗೆ ಹೇಗೆ ಬಂದವು, ಇಟ್ಟವರು ಯಾರು. ಕರೆ ಮಾಡಿದ್ದ ವ್ಯಕ್ತಿಯೇ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ್ದನಾ. ಎರಡಕ್ಕೂ ಸಂಬಂಧವಿದೆಯಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

-ಗಿರೀಶ್, ಕೇಂದ್ರ ವಲಯ ಡಿಐಜಿ