ಇಂದಿನ ಯುವಜನತೆ ಭಾರತೀಯ ಇತಿಹಾಸ, ಪರಂಪರೆ ಹಾಗೂ ನೆಲಮೂಲ ಸಂಸ್ಕೃತಿಯನ್ನು ಆಳವಾಗಿ ಅರ್ಥೈಸಿಕೊಂಡು, ಅದರ ಶ್ರೀಮಂತಿಕೆ ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕಾರ್ಕಳ : ಇಂದಿನ ಯುವಜನತೆ ಭಾರತೀಯ ಇತಿಹಾಸ, ಪರಂಪರೆ ಹಾಗೂ ನೆಲಮೂಲ ಸಂಸ್ಕೃತಿಯನ್ನು ಆಳವಾಗಿ ಅರ್ಥೈಸಿಕೊಂಡು, ಅದರ ಶ್ರೀಮಂತಿಕೆ ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸ್ಫೂರ್ತಿಮಾತು ಕಾರ್ಯಕ್ರಮದ 18ನೇ ಸರಣಿಯಲ್ಲಿ ಜೆನ್‌-ಜಿ: ಹೊಸ ಭಾರತದ ನವಶಕ್ತಿ ವಿಷಯದ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೇ ಹೆಚ್ಚು ಸಮಯ ಕಳೆಯುವ ಬದಲು ಹೊಸ ಆವಿಷ್ಕಾರಗಳು, ಸಂಶೋಧನೆ ಹಾಗೂ ಸೃಜನಶೀಲ ಚಟುವಟಿಕೆಗಳತ್ತ ಗಮನಹರಿಸಬೇಕು ಎಂದರು.

ಜೆನ್‌ ಜಿ ಕೊಡುಗೆ: ಭಾರತದ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಜೆನ್‌-ಜಿ ಯುವಕರ ಕೊಡುಗೆ ಮಹತ್ವದ್ದಾಗಿದೆ. ಭಾರತ ವಿರೋಧಿ ಚಟುವಟಿಕೆಗಳಿಂದ ದೂರವಿದ್ದು, ರಾಷ್ಟ್ರದ ಪ್ರಗತಿಗೆ ಪೂರಕವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ನಿಜವಾದ ಶಿಕ್ಷಣವೆಂದರೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಹೊರತಂದು ಅವರ ಭವಿಷ್ಯಕ್ಕೆ ಭದ್ರ ಬುನಾದಿ ಕಲ್ಪಿಸುವುದಾಗಿದೆ ಎಂದು ಹೇಳಿದ ಅವರು, ಮದನ್ ಲಾಲ್ ಧಿಂಗ್ರಾ, ಪ್ರಜ್ಞಾನಂದ, ಗುಕೇಶ್, ವೇದಮೂರ್ತಿ ದೇವವ್ರತ, ಮಹೇಶ್ ರೇಖೆ ಹಾಗೂ ವಂದನ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರ ಉದಾಹರಣೆಗಳನ್ನು ನೀಡಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ್ ಶೆಟ್ಟಿ, ಅಶ್ವತ್ ಎಸ್.ಎಲ್., ಆದರ್ಶ ಎಂ.ಕೆ., ಗಣಪತಿ ಭಟ್ ಕೆ.ಎಸ್. ಹಾಗೂ ಅಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಶೆಟ್ಟಿ ಇದ್ದರು. ರಸಾಯನಶಾಸ್ತ್ರ ಉಪನ್ಯಾಸಕ ಪ್ರಜ್ವಲ್ ನಿರೂಪಿಸಿದರು.