ಸಾರಾಂಶ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ
ಕನ್ನಡಪ್ರಭ ವಾರ್ತೆ ಬಳ್ಳಾರಿಮಹಿಳೆಯರು ಆರ್ಥಿಕ ಸ್ವಾವಲಂಬಿಯಾದರೆ ಮಾತ್ರ ಲಿಂಗ ಸಮಾನತೆ ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಹೇಳಿದರು.
ನಗರದ ಎಸ್ ಎಸ್ ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣಕೋಶ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಕೂಡಾ ಮಹಿಳೆಯರ ಅಭಿವೃದ್ಧಿ,ಸಮಾನತೆಗೆ ಪೂರಕ ನಿಜ, ಆದರೆ ಕಷ್ಟಪಟ್ಟು ವಿದ್ಯಾರ್ಜನೆ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿಗಳು ತಾವು ಕಾಲೇಜಿಗೆ ಬರುತ್ತಿರುವ ಪ್ರಮುಖ ಉದ್ದೇಶ ಮರೆಯಬಾರದು ಎಂದ ಎಸ್ಪಿ ಶೋಭಾರಾಣಿ, ಈ ಸುವರ್ಣ ದಿನ ಪ್ರಗತಿಗೆ ಮೆಟ್ಟಿಲು ಮಾಡಿಕೊಳ್ಳಬೇಕು. ಪ್ರೀತಿ, ಪ್ರೇಮದ ಬಲೆಗೆ ಬೀಳದೆ ಗುರಿ ತಲುಪಬೇಕು ಎಂದು ಕಿವಿಮಾತು ಹೇಳಿದರು.ಯುಪಿಎಸ್ಸಿ (ಐಪಿಎಸ್) ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಎರಡು ವರ್ಷ ಮೊಬೈಲ್ ಆಫ್ ಮಾಡಿ ಅಮ್ಮನ ಕೈಗೆ ಕೊಟ್ಟಿದ್ದೆ. ಹೀಗಾಗಿ 2016ರಲ್ಲಿ ಪೊಲೀಸ್ ಅಧಿಕಾರಿಯಾಗಲು ಸಾಧ್ಯವಾಯಿತು ಎಂದು ತಮ್ಮ ಸಾಧನೆ ಕುರಿತು ಮುಕ್ತವಾಗಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಪ್ರಹ್ಲಾದ ಚೌಧರಿ ಮಹಿಳೆಯರ ಸಬಲೀಕರಣಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಲಿ, ಮಹಾನಗರ ಪಾಲಿಕೆ ಸದಸ್ಯರೂ ಆಗಿರುವ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯೆ ರೇಷ್ಮಾ ಮಾತನಾಡಿದರು.
ಇದೇ ವೇಳೆ ಎಸ್ಪಿ ಶೋಭಾರಾಣಿ ಕಾಲೇಜಿನ ಸಮೃದ್ಧಿ ಮಹಿಳಾ ವೇದಿಕೆಗೆ ಚಾಲನೆ ನೀಡಿದರು.ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯೆ ಸಲ್ಮಾ ಎಸ್.ಕೆ, ಲೆಕ್ಕ ಪರಿಶೋಧಕಿ ಕೋಮಲ ಜೈನ್, ಇನ್ನರ್ ವ್ಹೀಲ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಜೆ. ಶಿಲ್ಪ ಸುಜೀತ್, ಕಾಲೇಜು ಮಹಿಳಾ ಸಬಲೀಕರಣದ ಸಂಚಾಲಕಿ ಡಾ.ಜ್ಯೋತಿ ಅಣ್ಣಾರಾವ್ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕಿ ಡಾ. ಕೆ. ಚೂಡಾಮಣಿ ಸ್ವಾಗತಿಸಿದರು. ಪ್ರೊ.ನಾಜಿಯಾ ಖಾಜಿ ನಿರೂಪಿಸಿದರು. ಡಾ.ಶಿರಿಷಾ ವಂದಿಸಿದರು.