ಕನ್ನಡಪ್ರಭ ವಾರ್ತೆ ಮಡಿಕೇರಿ
ಅರಮನೆಪಾಲೆ ಸಮಾಜದ ಮರಣ ಧನ ಸಹಾಯ ನಿಧಿಯ ಮಹಾಸಭೆ ಮೂರ್ನಾಡುವಿನ ವ್ಯವಸಹಾಯ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆಸಲಾಯಿತು.ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅರಮನೆಪಾಲೆ ಸಮಾಜದ ಪ್ರಧಾನ ಸಂಘಟಕ ಮಂದಣ್ಣ ಪಿ.ಕೆ., ಸಮುದಾಯ ಬಾಂಧವರು ಮರಣ ಹೊಂದಿದ ಸಮಯದಲ್ಲಿ ಸಮುದಾಯದ ಪ್ರತಿ ಸದಸ್ಯರಿಂದ 25 ರು. ಸಂಗ್ರಹಿಸಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ತಲಾ 10 ಸಾವಿರದಂತೆ 2015ನೇ ಇಸವಿಯಿಂದ ಇಲ್ಲಿಯವರೆಗೆ ಅರಮನೆಪಾಲೆ ಸಮಾಜದಿಂದ ನೀಡಲಾಗುತ್ತಿದೆ ಎಂದರು.
ಇಲ್ಲಿಯವರೆಗೆ ಸುಮಾರು ಏಳು ಲಕ್ಷದ ತೊಂಬತ್ತು ಸಾವಿರ ರು. ವಿತರಿಸಲಾಗಿದ್ದು, ಇದು ಅರಮನೆಪಾಲೆ ಸಮಾಜದ ಅತ್ಯುನ್ನತ ಸೇವಾ ಕಾರ್ಯವಾಗಿದ್ದು, ಆಪತ್ಕಾಲದಲ್ಲಿ ಸಮುದಾಯ ಬಾಂಧವರನ್ನು ರಕ್ಷಿಸುತ್ತಿದೆ. ಸಮಾಜದ ಅಧೀನದಲ್ಲಿ ಸುಮಾರು 32 ಗ್ರಾಮಗಳಿಗೆ ಸಂಬಂಧಿಸಿದಂತೆ ಒಂಬತ್ತು ಗ್ರಾಮ ಸಮಿತಿಗಳನ್ನು ರಚಿಸಿಕೊಂಡಿದ್ದು, ಪ್ರತಿ ಗ್ರಾಮ ಸಮಿತಿಗಳ ಅಭ್ಯುದಯಕ್ಕಾಗಿ ಸಮಾಜದ ಪರವಾಗಿ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಮಾಜ ಬಾಂಧವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಸತತ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಮಂಜುನಾಥ್ ಕಕ್ಕಬ್ಬೆ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಉಪಾಧ್ಯಕ್ಷ ಸುಜುದೇವಯ್ಯ ಬಾಳುಗೋಡು, ಕಾರ್ಯದರ್ಶಿ ದೇವಯ್ಯ ಹಾಕತೂರು, ಖಜಾಂಚಿ ಮಾಜಿ ಯೋಧ ಸುಭಾಷ್ ಬಾಳುಗೋಡು, ಮರಣ ಧನ ಸಹಾಯ ನಿಧಿಯ ಅಧ್ಯಕ್ಷ ಯತೀಶ್ ಬಿದ್ದಪ್ಪ ಬಾಳುಗೋಡು, ನಿರ್ದೇಶಕರಾದ ಲೀನಾ ಶಿವಪ್ಪ ಕಂಡಿಮಕ್ಕಿ, ದಮಯಂತಿ ಬಿಳಿಗೇರಿ, ಸರಿತ ನಾಗಬಾಣೆ, ರವಿ ಗಣೇಶ್ ಪೇರೂರು ಮತ್ತು ವಿವಿಧ ಗ್ರಾಮ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕ್ರಿಕೆಟ್ ಪಂದ್ಯಾಟದ ಕಾರ್ಯದರ್ಶಿಗಳಾದ ರಘು ಹಾಕತೂರು ಭಾಗವಹಿಸಿದ್ದರು.
