ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು, ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು, ಉಡುಪಿ ಧರ್ಮಪ್ರಾಂತ್ಯದಲ್ಲಿ ಭಾನುವಾರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು.ಜುಬಿಲಿ ವರ್ಷಕ್ಕೆ ಡಿಸೆಂಬರ್ 24 ರಂದು ವ್ಯಾಟಿಕನ್‌ನಲ್ಲಿ ಜಗದ್ಗುರು ಪೋಪ್ ಜಗದ್ಗುರು ಫ್ರಾನ್ಸಿಸ್ ಅವರು ಸೈಂಟ್ ಪೀಟರ್ ಬೆಸಿಲಿಕಾದ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉದ್ಘಾಟನೆ ಮಾಡಿದ್ದು ಅದರ ದ್ಯೋತಕವಾಗಿ ವಿಶ್ವದ ಎಲ್ಲ ಕ್ಯಾಥೋಲಿಕ್ ಧರ್ಮಪ್ರಾಂತ್ಯದಲ್ಲಿ ಭಾನುವಾರ ಆಯಾ ಕ್ಯಾಥೆಡ್ರಲ್‌ಗಳ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಚಾಲನೆ ನೀಡಲಾಯಿತು.
ಬಳಿಕ ಧರ್ಮಾಧ್ಯಕ್ಷರು ಪವಿತ್ರ ಬಲಿಪೂಜೆ ಅರ್ಪಿಸಿ ತಮ್ಮ ಸಂದೇಶದಲ್ಲಿ ಹಳೆಯ ಒಡಂಬಡಿಕೆಯಿಂದ ಉದಾಹರಣೆಗಳನ್ನು ಉಲ್ಲೇಖಿಸುವ ಮೂಲಕ ಜುಬಿಲಿ ಮಹೋತ್ಸವದ ಅರ್ಥ ಮತ್ತು ಮಹತ್ವವನ್ನು ವಿವರಿಸಿದರು.ಮಹೋತ್ಸವವು ಐದು ಪ್ರಮುಖ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದ ಅವರು, ಜುಬಿಲಿ ಎಂದರೆ ಪಂಚ ‘ಸ’ ಗಳಾದ ಸ್ಮರಣೆ, ಸಂತಾಪ, ಸಂಧಾನ, ಸನ್ಮಾರ್ಗ ಮತ್ತು ಸಂಭ್ರಮಗಳ ಸುಮಧುಕ ಸಮ್ಮಲಿನ. ನಮ್ಮ ದೈನಂದಿನ ಜೀವನದಲ್ಲಿ ದೇವರ ಪ್ರೀತಿಯನ್ನು ಸ್ಮರಣೆ ಮಾಡುವುದರ ಮೂಲಕ, ದೇವರು ಮತ್ತು ಸಮಾಜದೊಂದಿಗೆ ಸಂಧಾನ ಮತ್ತು ಸಾಮರಸ್ಯದ ಮೂಲಕ ಸನ್ಮಾರ್ಗದಲ್ಲಿ ಬದುಕುವ ಮೂಲಕ ಸಂಭ್ರಮದ ಆಚರಣೆ ಮಾಡುವುದು ಮಹೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದರು. ಪವಿತ್ರ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಡಾ. ರೋಶನ್ ಡಿಸೋಜ, ಅನುಗ್ರಹ ಪಾಲನಾ ಕೇಂದ್ರದ ನಿರ್ದೇಶಕ ವಂ. ವಿನ್ಸೆಂಟ್ ಕ್ರಾಸ್ತಾ, ಸಂಪದ ನಿರ್ದೇಶಕ ವಂ. ರೆಜಿನಾಲ್ಡ್ ಪಿಂಟೊ, ಧಾರ್ಮಿಕ ಆಯೋಗಳಗಳ ವಂ. ಸಿರಿಲ್ ಲೋಬೊ, ವಂ. ವಿಲ್ಸನ್ ಡಿಸೋಜ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಸಹಾಯಕ ಧರ್ಮಗುರುಗಳಾದ ವಂ. ಪ್ರದೀಪ್ ಕಾರ್ಡೋಜಾ, ವಂ.ಡಾ. ಜೆನ್ಸಿಲ್ ಆಳ್ವ, ಅತಿಥಿ ಧರ್ಮಗುರುಗಳಾದ ವಂ. ರೋನ್ಸನ್ ಡಿಸೋಜಾ, ವಂ. ಮನೋಜ್ ಫುರ್ಟಾಡೊ, ವಂ. ವಲೇರಿಯನ್ ಕ್ಯಾಸ್ತಲಿನೋ, ವಂ. ವಿನ್ಸೆಂಟ್ ಲೋಬೊ ಉಪಸ್ಥಿತರಿದ್ದರು.