ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ ತಕ್ಷಣ ಚಾಲನೆ ಗೊಳಿಸುವಂತೆ ಕುಶಾಲನಗರ ಪುರಸಭೆ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಒಳಚರಂಡಿ ಯೋಜನೆಯ ಬಗ್ಗೆ ಸಂಬಂಧಿಸಿದ ಮಂಡಳಿ ಅಧಿಕಾರಿ ಪ್ರಸನ್ನ ಕುಮಾರ್ ಅವರಿಂದ ಮಾಹಿತಿ ಬಯಸಿದರು.
ಯೋಜನೆ ಬಹುತೇಕ ಪೂರ್ಣಗೊಂಡಿದ್ದು ಮನೆಮನೆಗಳಿಂದ ಹೊರಸೂಸುವ ತ್ಯಾಜ್ಯಗಳನ್ನು ಸಂಪರ್ಕಿಸುವ ಪೈಪುಗಳ ಜೋಡಣೆ ಕಾಮಗಾರಿ ಬಾಕಿ ಇರುವುದಾಗಿ ತಿಳಿಸಿದ ಕರ್ನಾಟಕ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ತಿಳಿಸಿದರು.ಈ ಬಗ್ಗೆ ಮನೆಯಿಂದ ಸಂಪರ್ಕ ಕಲ್ಪಿಸುವ ಕಾಮಗಾರಿ ಹಾಗೂ ನಿರ್ವಹಣೆಯ ಬಗ್ಗೆ ಸಭೆಯಲ್ಲಿ ಸದಸ್ಯರಾದ ಡಿ ಕೆ ತಿಮ್ಮಪ್ಪ ಜಯವರ್ಧನ್ ಮತ್ತು ಆನಂದ್ ಕುಮಾರ್ , ಪ್ರಮೋದ್ ಮುತ್ತಪ್ಪ ಅವರು ಅಧಿಕಾರಿಯಿಂದ ಸಮಗ್ರ ಮಾಹಿತಿಯನ್ನು ಸಭೆಗೆ ಒದಗಿಸುವಂತೆ ಆಗ್ರಹಿಸಿದರು.
ಮನೆ ಮನೆ ಸಂಪರ್ಕ ನೀಡುವ ಸಂದರ್ಭ ಪ್ರತಿ ಮನೆಯಿಂದ ಶುಲ್ಕ ಪಡೆಯುವುದಾಗಿ ತಿಳಿಸಿದ ಪ್ರಸನ್ನ ಕುಮಾರ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಂಬಂಧಿಸಿದ ಮಂಡಳಿ ಅಧಿಕಾರಿಗಳಿಂದ ಇಚ್ಚಾ ಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣ ಎಂದು ಸದಸ್ಯರು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಪುರಸಭೆ ಮುಖ್ಯ ಅಧಿಕಾರಿ ಈಗಾಗಲೇ ಪಟ್ಟಣದಿಂದ ನೇರವಾಗಿ ನದಿಗೆ ಕಲುಷಿತ ತ್ಯಾಜ್ಯಗಳು ಸೇರುವುದನ್ನು ತಪ್ಪಿಸಲು ಈಗಾಗಲೇ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗಿದೆ.ತಕ್ಷಣ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಂಡು ಅನುಷ್ಠಾನಗೊಳ್ಳದಿದ್ದಲ್ಲಿ ಪುರಸಭೆಗೆ ದಂಡ ತೆರುವ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶೀಘ್ರವಾಗಿ ಒಳಚರಂಡಿ ಯೋಜನೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಬಗ್ಗೆ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆ ಕರೆಯಲು ಸದಸ್ಯರು ಆಗ್ರಹಿಸಿದರು. ಈ ಸಂದರ್ಭ ಮಂಡಳಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಕುಶಾಲನಗರದ ಪಟ್ಟಣ ಹಾಗೂ ಗ್ರಾಮಗಳ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಯೋಜನೆ ಅನುಷ್ಠಾನಗೊಳಿಸುವ ಕ್ರಮ ಆಗಬೇಕಾಗಿದೆ ಎಂದು ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಪಟ್ಟಣದಲ್ಲಿ ಇರುವ ಕೆರೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವುದು ಕೆರೆ ಮತ್ತು ನದಿಗೆ ನೀರು ಹರಿಯುವ ತೋಡುಗಳ ಒತ್ತುವರಿಯನ್ನು ತೆರೆವುಗೊಳಿಸುವುದು, ಕುಶಾಲನಗರ ತಾವರೆಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಕೆರೆ ಆವರಣದಲ್ಲಿ ಅಕ್ರಮವಾಗಿ ತುಂಬಲಾಗಿರುವ ಮಣ್ಣನ್ನು ತಕ್ಷಣ ತೆರವುಗೊಳಿಸುವಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭ ಸದಸ್ಯರಾದ ರೇಣುಕಾ, ಜಯ ವರ್ಧನ್ ಡಿಕೆ ತಿಮ್ಮಪ್ಪ ಅವರು ಮಾತನಾಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರುಕಳೆದ ಮಳೆಗಾಲದಲ್ಲಿ ಕೆರೆ ಕೋಡಿ ಒಡೆದಿರುವ ರೊಂಡ ಕೆರೆ ಕಾಮಗಾರಿ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯರಾದ ಎಂ ಪ್ರಕಾಶ್ ಸಭೆಯ ಗಮನಕ್ಕೆ ತಂದರು.
ಕೂಡಿಗೆ ಬಳಿಯಿಂದ ಕುಶಾಲ ನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಹಿನ್ನೆಲೆಯಲ್ಲಿ ಆಗಿರುವ ಪ್ರಗತಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ವರ್ಷದ ಎಲ್ಲಾ ದಿನಗಳಲ್ಲಿ ಕುಶಾಲನಗರ ಪಟ್ಟಣ ಹಾಗೂ ಪಿರಿಯಾಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ ನಡೆಯುತ್ತಿರುವುದಾಗಿ ಅಧಿಕಾರಿಗಳು ಹೇಳಿದರು.ಕುಶಾಲನಗರದಲ್ಲಿ ಕೇಂದ್ರ ಗ್ರಂಥಾಲಯಕ್ಕೆ ಕಟ್ಟಡ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಬಂದ ಮನವಿ ಬಗ್ಗೆ ಚರ್ಚಿಸಲಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.
ಬೈಚನಹಳ್ಳಿ ಗುಂಡುರಾವ್ ಬಡಾವಣೆ ವ್ಯಾಪ್ತಿಯಲ್ಲಿ ಪುರಸಭೆ ವತಿಯಿಂದ ಯಾವುದೇ ಕಾಮಗಾರಿಗೆ ಅನುದಾನ ಒದಗಿಸಿಲ್ಲ ಎಂದು ರೇಣುಕಾ ಅವರು ಸಭೆಯ ಗಮನಕ್ಕೆ ತಂದರು.ಕುಶಾಲನಗರ ಗಡಿಭಾಗದ ವ್ಯಾಪ್ತಿಯಲ್ಲಿ ಆಕರ್ಷಕ ಸ್ವಾಗತ ಕಮಾನು ನಿರ್ಮಾಣ ಮಾಡುವ ಬಗ್ಗೆ ಸದಸ್ಯರಾದ ಶೇಕ್ ಕಲಿಮುಲ್ಲಾ ಅವರು ಸಭೆಯಲ್ಲಿ ಚರ್ಚಿಸಿದರು.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ಸಮುದಾಯ ಭವನ, ಆರತಿ ಕಟ್ಟೆ ನಿರ್ಮಾಣ ಬಗ್ಗೆ ಸದಸ್ಯರಾದ ಜಯ ವರ್ಧನ್, ಡಿ ಕೆ ತಿಮ್ಮಪ್ಪ ಅವರು ಪ್ರಸ್ತಾಪಿಸಿದರು.ಕೋಣ ಮಾರಿಯಮ್ಮ ದೇವಾಲಯದ ಅಭಿವೃದ್ಧಿಗೆ ಪುರಸಭೆಯಿಂದ ಅನುದಾನ ಕಲ್ಪಿಸುವುದು, ಪಟ್ಟಣದ ವಿವೇಕಾನಂದ ಕಾಲನಿಯಲ್ಲಿ ಸಮುದಾಯ ಭವನ ನಿರ್ಮಾಣ ತಡೆಗೋಡೆ ಕಾಮಗಾರಿ ಬಗ್ಗೆ ಸದಸ್ಯರಾದ ಶಿವಶಂಕರ್ ಸಭೆಯಲ್ಲಿ ಚರ್ಚೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ನೀಡಿದರು.
ಇದೆ ಸಂದರ್ಭದಲ್ಲಿ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಅಂಗೀಕರಿಸಲಾಯಿತು.ಪಟ್ಟಣ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ವಿದ್ಯುತ್ ಸಂಪರ್ಕ ಸಮಸ್ಯೆ, ಪಟ್ಟಣದ ವಾಹನ ಸಂಚಾರ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.
ಪಟ್ಟಣದ ವ್ಯಾಪ್ತಿಯ ಬೀದಿ ದೀಪ ನಿರ್ವಹಣೆ ಕಾಮಗಾರಿಗೆ ಟೆಂಡರ್ ಆಹ್ವಾನಿಸುವ ಕುರಿತು, ಪಟ್ಟಣದ ವಿವಿಧ ಕಡೆ ಬಡಾವಣೆಗಳಲ್ಲಿ ಒಳ ಚರಂಡಿ ಯೋಜನೆಗೆ ಪೈಪ್ ಲೈನ್ ಅಳವಡಿಸಿ ಜೋಡಣೆ ಮಾಡುವ ಕಾಮಗಾರಿ, ಕುಶಾಲನಗರದ ಪಟ್ಟಣದ ವೃತ್ತವನ್ನು ವಿಸ್ತರಣೆ ಮಾಡುವ ಬಗ್ಗೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್, ಉಪಾಧ್ಯಕ್ಷರಾದ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ ಬಿ ಸುರೇಶ್ ಮತ್ತು ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ ಅಧಿಕಾರಿ ಸಿಬ್ಬಂದಿ ಇದ್ದರು.