ಸಾರಾಂಶ
ಗದಗ: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನಾಂದೋಲವನ್ನಾಗಿ ರೂಪಿಸುವ ಉದ್ದೇಶದಿಂದ ಅ. 5 ಮತ್ತು 6ರಂದು ತುಮಕೂರು ನಗರದ ದೇವರಾಜ ಅರಸು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದ ಎಂಪ್ರೆಸ್ ಅಡಿಟೋರಿಯಂನಲ್ಲಿ ರಾಜ್ಯ ಸರ್ವ ಸದಸ್ಯರ ಮಹಾಅಧಿವೇಶನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಬಾಲರಾಜ ಅರಬರ ವಿನಂತಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಹಸಿವು, ಅಸಮಾನತೆಯಿಂದ ಕೂಡಿದ್ದ ಸಮಾಜದ ಬದಲಾವಣೆಗಾಗಿ ಮತ್ತು ಭಾರತದ ಪ್ರಗತಿಗಾಗಿ ಸಮಗ್ರ ಸಂವಿಧಾನವನ್ನು ರಚಿಸಿ ಭದ್ರ ಬುನಾದಿಯನ್ನು ಹಾಕಿ, ಹುಟ್ಟಿದ ಪ್ರತಿಯೊಬ್ಬರೂ ಘನತೆ, ಗೌರವಗಳಿಂದ ಬದುಕಲು ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಶ್ರಮಿಸಿದವರು ಡಾ. ಬಾಬಾಸಾಹೇಬ ಅಂಬೇಡ್ಕರರು ಎಂದರು.ಅವರ ವಿಚಾರಗಳ ಪ್ರೇರಣೆಯಾಗಿಸಿಕೊಂಡು ಕರ್ನಾಟಕದಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರ ನಾಯಕತ್ವದಲ್ಲಿ ಪ್ರಾರಂಭವಾದ ದಲಿತ ಸಂಘರ್ಷ ಸಮಿತಿ ನಾಡಿನ ಉದ್ದಗಲಕ್ಕೂ ಶೋಷಕ ಶಕ್ತಿಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿ, ಮೂಲಭೂತ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ಚಳವಳಿಗಳು ಅಸಂಖ್ಯಾತ. ಸಾವಿರಾರು ಕಾರ್ಯಕರ್ತರ ತ್ಯಾಗ, ಬಲಿದಾನಗಳಿಂದ ಕಟ್ಟಿದ ನಮ್ಮ ದಲಿತ ಚಳವಳಿಗೀಗ 50 ವರ್ಷಗಳು. ಇದೇ ದಲಿತ ಚಳವಳಿ ಕರ್ನಾಟಕದ ಜನ ಚಳವಳಿಗಳಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ. ಆದರೆ ಕೆಲವು ಮತೀಯ ಶಕ್ತಿಗಳು ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ, ಸಾವಿರಾರು ಜಾತಿ, ಉಪಜಾತಿಗಳನ್ನಾಗಿ ಛಿದ್ರಗೊಳಿಸಿ, ಅಸಮಾನತೆ ಸೃಷ್ಟಿಸಿತು. ಇದೇ ಕೋಮುವಾದಿಗಳು ಏಕತೆಯ ಹೆಸರಿನಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ನಗಣ್ಯ ಮಾಡಿ, ಒಂದು ದೇಶ, ಒಂದು ಕಾನೂನು, ಒಂದು ಭಾಷೆ, ಒಂದು ಸಂಸ್ಕೃತಿ, ಒಂದೇ ಧರ್ಮ ಎಂದು ಪಠಿಸುತ್ತಿದ್ದಾರೆ. ಇಂತಹ ಮತೀಯ ಮತ್ತು ಜಾತಿವಾದಿ ಶಕ್ತಿಗಳ ವಿರುದ್ಧ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ದ.ಸಂ.ಸ.ದ ನಾಯಕತ್ವ ವಹಿಸಿರುವ ಮಾವಳ್ಳಿ ಶಂಕರ ಅವರು ಸಮ ಸಮಾಜದ ಕನಸುಗಳನ್ನು ನನಸಾಗಿಸಲು ನಾಡಿನ ಉದ್ದಗಲಕ್ಕೂ ನೀಲಿ ಅಭಿಯಾನವನ್ನು ಕೈಗೊಂಡು ಚಳವಳಿಗೆ ಹೊಸ ಚೈತನ್ಯ ತುಂಬಿ ಮುನ್ನಡೆಸುತ್ತಿದ್ದಾರೆ. ಅವರೆಲ್ಲ ವಿಚಾರಧಾರೆಗಳನ್ನು ಜನಾಂದೋಲವನ್ನಾಗಿ ರೂಪಿಸುವ ಕಾರಣದಿಂದ ಈ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದರು.
ದಸಂಸ ಒಕ್ಕೂಟ ಜಿಲ್ಲಾ ಸಂಚಾಲಕ ನಾಗರಾಜ ಗೋಕಾವಿ, ವೆಂಕಟೇಶಯ್ಯ, ಮುತ್ತಪ್ಪ ಭಜಂತ್ರಿ, ಮಾಂತೇಶ್ ನಡಗೇರಿ, ವಾಸುದೇವ ಹುಣಿಸಿಮರದ, ಗುರುರಾಜ ಭಜಂತ್ರಿ, ಸಂತೋಷ ಬಣಕಾರ, ಮುತ್ತು ಚೌಡಣ್ಣವರ, ಪ್ರಕಾಶ ಗಡ್ಡದವರ, ಸಂತೋಷ ಜಾಲಣ್ಣವರ ಉಪಸ್ಥಿತರಿದ್ದರು.