ಕಟ್ಟ ಕಡೆಯ ವ್ಯಕ್ತಿಗೂ ಸಮಾನವಾಗಿ ಬದುಕು ರೂಪಿಸಿ ದೇಶ ಮುನ್ನಡೆಯಲು ಯಾವುದೇ ಜಾತಿ, ಧರ್ಮಗಳ ಎಲ್ಲಾ ಜನರು ಸಮಾನರು. ಎಲ್ಲರಿಗೂ ಇರುವುದು ಒಂದೇ ಹಕ್ಕು. ಉತ್ತಮ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಎಲ್ಲರನ್ನು ಸ್ಮರಿಸಿ ರಾಷ್ಟ್ರೀಯ ಹಬ್ಬವನ್ನು ಮನೆ ಹಬ್ಬಗಳಂತೆ ಆಚರಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದೇಶಕ್ಕಾಗಿ ಹೋರಾಡಿ ಮಡಿದ ಮಹನೀಯರು, ಹಿರಿಯರನ್ನು ಸ್ಮರಿಸಿ ಗೌರವಿಸಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಕರೆ ನೀಡಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಹರಿದು ಹಂಚಿ ಹೋಗಿದ್ದ ದೇಶದ ರಾಜ್ಯಗಳನ್ನು ಒಗ್ಗೂಡಿಸಿ ಒಂದು ಒಕ್ಕೂಟದ ಅಡಿಯಲ್ಲಿ ಸಂವಿಧಾನ ರಚಿಸಿ ಪ್ರತಿಯೊಬ್ಬ ದೇಶದ ಪ್ರಜೆಗೂ ಒಂದೇ ಸಮಾನತೆ ಎಂಬ ಅಡಿಯಲ್ಲಿ ಈ ಸಂವಿಧಾನ ಬಳಕೆ ಮಾಡಲಾಗಿದೆ ಎಂದರು.

ಕಟ್ಟ ಕಡೆಯ ವ್ಯಕ್ತಿಗೂ ಸಮಾನವಾಗಿ ಬದುಕು ರೂಪಿಸಿ ದೇಶ ಮುನ್ನಡೆಯಲು ಯಾವುದೇ ಜಾತಿ, ಧರ್ಮಗಳ ಎಲ್ಲಾ ಜನರು ಸಮಾನರು. ಎಲ್ಲರಿಗೂ ಇರುವುದು ಒಂದೇ ಹಕ್ಕು. ಉತ್ತಮ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಎಲ್ಲರನ್ನು ಸ್ಮರಿಸಿ ರಾಷ್ಟ್ರೀಯ ಹಬ್ಬವನ್ನು ಮನೆ ಹಬ್ಬಗಳಂತೆ ಆಚರಿಸಬೇಕು ಎಂದರು.

ಪೊಲೀಸರು ಸೇರಿದಂತೆ ಪಟ್ಟಣದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನ ನಡೆಸಿ, ಶಾಸಕರ ಗೌರವ ವಂದನೆ ಸಲ್ಲಿಸಿದರು.

ಇದಕ್ಕೂ ಮುನ್ನ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಮುಖ್ಯಾಧಿಕಾರಿ ಎಂ.ರಾಜಣ್ಣ ಧ್ವಜಾರೋಣ ಕಾರ್ಯ ನೆರವೇರಿಸಿದರು. ನಂತರ ತೆರೆದ ವಾಹನದ ಮೂಲಕ ಭಾರತಾಂಬೆಯ ಭಾವಚಿತ್ರಕ್ಕೆ ಅಲಂಕರಿಸಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ, ಐತಿಹಾಸಿಕ ಬತೇರಿಯ ಮೇಲೆ ತಹಸೀಲ್ದಾರ್ ಚೇತನಾ ಯಾದವ್ ಅವರಿಂದ ಧ್ವಜಾರೋಣ ಕಾರ್ಯ ನೆರವೇರಿಸಲಾಯಿತು.

ಈ ವೇಳೆ ತಾಪಂ ಇಒ ವೇಣು, ಬಿಇಒ ನಂದೀಶ್, ಡಿವೈಎಸ್‌ಪಿ ಶಾಂತ ಮಲ್ಲಪ್ಪ ಸೇರಿದಂತೆ ಇತರ ಹಿರಿಯ ಪೊಲೀಸರು, ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಇಲಾಖಾ ಅಧಿಕಾರಿ ವರ್ಗದ ನೇತೃತ್ವದಲ್ಲಿ ಹೆಚ್ಚು ಕ್ರೀಡೆ ಹಾಗೂ ಅಂಕ ಪಡೆದ ಪ್ರತಿಭಾವಂತರು, ಇತರೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.