ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪದೇ ಪದೆ ಭೂ ಕುಸಿತ ಸಂಭವಿಸುತ್ತಿರುವ ತಾಲೂಕಿನ ದೊಡ್ಡತಪ್ಪಲೆ ಹಾಗೂ ಇನ್ನಿತರೆ ಸ್ಥಳಗಳಿಗೆ ಶುಕ್ರವಾರ ಭೂಗರ್ಭ ಶಾಸ್ತ್ರಜ್ಞರ ತಂಡ ಭೇಟಿ ನೀಡಿತ್ತು.ತಹಸೀಲ್ದಾರ್ ಮೇಘನಾ ಹಾಗೂ ಉಪ ವಿಭಾಗಾಧಿಕಾರಿ ಶ್ರುತಿ ನೇತೃತ್ವದಲ್ಲಿ ಅನಾಹುತ ಸಂಭವಿಸಿದ ಸ್ಥಳಗಳಿಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಅಲ್ಲಿನ ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಕೊಂಡೊಯ್ಯಲಾಗಿದೆ. ಅತಿಯಾದ ಮಳೆಯಿಂದಾಗಿ ಭೂಮಿಯ ಪದರಗಳ ಒಳಗೆ ನೀರು ಸೇರಿಕೊಂಡು ಭೂ ಕುಸಿತ ಆಗುತ್ತಿದೆ. ಹಾಗೆಯೇ ರಸ್ತೆ ಅಗಲೀಕರಣಕ್ಕಾಗಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಯಂತ್ರಗಳಿಂದ ಕತ್ತರಿಸುತ್ತಿರುವುದು ಭೂ ಕುಸಿತಕ್ಕೆ ಮೇಲ್ನೋಟದ ಕಾರಣಗಳಾಗಿವೆ ಎಂದು ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.
ತಾಲೂಕಿನಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದ್ದು ರಾಷ್ಟ್ರಿಯ ಹೆದ್ದಾರಿ ೭೫ರ ಶಿರಾಡಿಘಾಟ್‌ನಲ್ಲಿ ಹೊಸದಾಗಿ ಮತ್ತಷ್ಟು ಭೂ ಕುಸಿತ ಸಂಭವಿಸಿದೆ. ಮಳೆ ಬಿರುಸು ಕಳೆದುಕೊಂಡಿದ್ದರೂ ದುಷ್ಪರಿಣಾಮಗಳು ಕಡಿಮೆಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ೭೫ರ ದೋಣಿಗಾಲ್ ಗ್ರಾಮದಿಂದ ಮಾರನಹಳ್ಳಿ ಗ್ರಾಮದವರೆಗೆ ಗುರುವಾರ ರಾತ್ರಿ ಮತ್ತಷ್ಟು ಭೂಕುಸಿತ ಸಂಭವಿಸಿದೆ. ಬುಧವಾರ ರಾತ್ರಿ ದೊಡ್ಡತಪ್ಲೆ ಗ್ರಾಮದ ಸಮೀಪ ಭಾರಿ ಪ್ರಮಾಣದ ಭೂಕುಸಿತಕ್ಕೆ ಸಿಲುಕಿದ್ದ ನಾಲ್ಕು ಲಾರಿಗಳಲ್ಲಿ ಮೂರು ಲಾರಿಗಳನ್ನು ಹೊರತೆಗೆಯಲು ರಾಜ್ಯ ವಿಪತ್ತು ನಿರ್ವಹಣೆ ಪಡೆ ಯಶಸ್ವಿಯಾಗಿದ್ದು ಪ್ರಪಾತಕ್ಕೆ ಜಾರಿರುವ ಲಾರಿಯನ್ನು ಹಾಗೆ ಬಿಡಲಾಗಿದೆ. ಇದೇ ಸ್ಥಳದಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸಿದ್ದು ಸ್ಥಳದಲ್ಲಿ ಬೀಡುಬಿಟ್ಟಿರುವ ವಿಪತ್ತು ನಿರ್ವಹಣಾ ಪಡೆ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದೆ.ಭೂಕುಸಿತದಿಂದ ಮಂಗಳೂರು-ಬೆಂಗಳೂರು ನಡುವಿನ ಸಂಚಾರ ಬಂದ್ ಆಗಿದ್ದು, ಶುಕ್ರವಾರ ಮಧ್ಯಾಹ್ನದಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ದೋಣಿಗಾಲ್ ಗ್ರಾಮದಿಂದ ಹೆಗ್ಗದ್ದೆ ಗ್ರಾಮದ ನಡುವೆ ಹಲವೆಡೆ ಭೂಕುಸಿತ ಸಂಭವಿಸಿದ್ದು ಟಿಪ್ಪರ್‌ಗಳ ಮೂಲಕ ಮಣ್ಣು ತೆರವುಗೊಳಿಸಲಾಗುತ್ತಿದ್ದು, ಇಡೀ ಹೆದ್ದಾರಿ ಕೆಸರುಮಯವಾಗಿದೆ. ಹೆದ್ದಾರಿಯಲ್ಲಿ ಅನಾಹುತ ಸಂಭವಿಸದಂತೆ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಹೆದ್ದಾರಿಯಲ್ಲೆ ಠಿಕಾಣಿ ಹೂಡಿದ್ದಾರೆ.