ಅರಣ್ಯದಲ್ಲಿ ರಾತ್ರಿ ಓಡಾಡಲು ಜಾರ್ಜ್‌ ಪುತ್ರ ಬೇಡಿಕೆ : ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

| Published : Nov 16 2024, 01:49 AM IST / Updated: Nov 16 2024, 09:26 AM IST

KJ George
ಅರಣ್ಯದಲ್ಲಿ ರಾತ್ರಿ ಓಡಾಡಲು ಜಾರ್ಜ್‌ ಪುತ್ರ ಬೇಡಿಕೆ : ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನುಗು ವನ್ಯಜೀವಿ ಅಭಯಾರಣ್ಯದ ರಸ್ತೆ ಮಾರ್ಗದ ಮೂಲಕ ರಾತ್ರಿ ಮತ್ತು ಬೆಳಗಿನ ಸಮಯದಲ್ಲಿ ಓಡಾಡಲು ಅನುಮತಿಸಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಪುತ್ರ ರಾಣಾ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ.

 ಬೆಂಗಳೂರು : ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನ ಸರಗೂರು ಹೋಬಳಿಯ ಶಂಭುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತಮ್ಮ ಖಾಸಗಿ ಜಮೀನಿಗೆ ನುಗು ವನ್ಯಜೀವಿ ಅಭಯಾರಣ್ಯದ ರಸ್ತೆ ಮಾರ್ಗದ ಮೂಲಕ ರಾತ್ರಿ ಮತ್ತು ಬೆಳಗಿನ ಸಮಯದಲ್ಲಿ ಓಡಾಡಲು ಅನುಮತಿಸಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಪುತ್ರ ರಾಣಾ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ.

ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆಯನ್ನು ಬಳಸದಂತೆ ನಿರ್ಬಂಧಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) 2024ರ ಮಾ.1ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ರಾಣಾ ಸಲ್ಲಿಸಿರುವ ಅರ್ಜಿ, ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರರ ಪರ ವಕೀಲರು ವಾದ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಸರ್ಕಾರ, ಅರಣ್ಯ ಇಲಾಖೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ನ.29ಕ್ಕೆ ಮುಂದೂಡಿತು

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಶಂಭುಗೌಡನಹಳ್ಳಿ ಮತ್ತು ಲಕ್ಕಸೋಗೆಯಲ್ಲಿನ ಸರ್ವೇ ನಂಬರ್‌ 1, 2, 3, 26, 32 ಮತ್ತು 33ರ ಭೂಮಿಯ ಮಾಲೀಕತ್ವವನ್ನು ಅರ್ಜಿದಾರರು ಹೊಂದಿದ್ದಾರೆ. ಈ ಆಸ್ತಿಯನ್ನು ಅರ್ಜಿದಾರರು ವೈಯಕ್ತಿಕವಾಗಿ ಬಳಕೆ ಮಾಡುತ್ತಿದ್ದು, ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಇಡೀ ಪ್ರದೇಶ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದೆ ಹಾಗೂ ನುಗು ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ವಿವರಿಸಿದರು.

ಅರ್ಜಿದಾರರು ತಮ್ಮ ಜಮೀನಿಗೆ ತೆರಳಲು ಮಣ್ಣಿನ ರಸ್ತೆಯನ್ನೇ ಆಶ್ರಯಿಸಿದ್ದಾರೆ. ಅದು ಸಹ ಅರಣ್ಯ ಇಲಾಖೆಯ ವಶದಲ್ಲಿದೆ. ರಾಣಾ ಅವರ ಜಮೀನಿಗೆ ತೆರಳಲು ಇನ್ನೊಂದು ರಸ್ತೆ ಇದ್ದು, ಮುಂಗಾರು ಅಥವಾ ನುಗು ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿಗಿಂತ ಹೆಚ್ಚಾದಾಗ ಅಲ್ಲಿ ಓಡಾಡಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ರಾಣಾ ಅವರಿಗೆ ಅರಣ್ಯ ಇಲಾಖೆಯ ದಾರಿ ಬಳಸದೇ ವಿಧಿಯಿಲ್ಲದಂತಾಗಿದೆ. 

ಅಭಯಾರಣ್ಯದ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವವರಿಗೆ ಓಡಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 27(1)(ಸಿ) ಅಡಿ ವಿನಾಯಿತಿ ಇದೆ. ಅದರಂತೆ ತಮ್ಮ ಜಮೀನಿಗೆ ಸಂಜೆ 6ರಿಂದ ಬೆಳಗಿನ ಜಾವ 6 ಗಂಟೆಯವರೆಗೆ ಅರಣ್ಯ ಇಲಾಖೆಯ ರಸ್ತೆಯಲ್ಲಿ ಓಡಾಡಲು ಅಧಿಕಾರಿಗಳು ನಿರ್ಬಂಧಿಸಿದ್ದಾರೆ. ಇದರಿಂದ ರಾತ್ರಿ -ಬೆಳಗ್ಗೆ ಸಮಯದಲ್ಲಿ ರಾಣಾ ಅವರಿಗೆ ಜಮೀನಿಗೆ ಓಡಾಡಲು ಅನುಮತಿ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.