ಉನ್ನತ ಹುದ್ದೆ ಪಡೆದು ಸಮಾಜದ ಋಣ ತೀರಿಸಿ

| Published : Oct 28 2025, 12:03 AM IST

ಸಾರಾಂಶ

ವಾಲ್ಮೀಕಿ ಸಮಾಜದ ಪ್ರತಿಯೊಬ್ಬರೂ ಕಡ್ಡಾಯವಾಗಿ ಉನ್ನತ ಶಿಕ್ಷಣ ಪಡೆಯಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ಟಿ.ಅರ್.ತುಲಸಿರಾಮ ಹೇಳಿದರು.

ಯಾದಗಿರಿ: ವಾಲ್ಮೀಕಿ ಸಮಾಜದ ಪ್ರತಿಯೊಬ್ಬರೂ ಕಡ್ಡಾಯವಾಗಿ ಉನ್ನತ ಶಿಕ್ಷಣ ಪಡೆಯಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ಟಿ.ಅರ್.ತುಲಸಿರಾಮ ಹೇಳಿದರು.

ಅಖಿಲ‌ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉತ್ತಮ‌, ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ನೀಡಿರುವ ಸೌಲಭ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಂಡು ಹೆಚ್ಚಿನ ಅಂಕಗಳನ್ನು ಪಡೆದು ಪಾಸಾಗಬೇಕು. ಆ ಮೂಲಕ ಉನ್ನತ ಹುದ್ದೆಗಳನ್ನು ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಋಣ ತೀರಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ರಾಜಕೀಯವಾಗಿ ಅಧಿಕಾರ ಸಿಕ್ಕಾಗ ಮಾತ್ರ ಸಮಾಜಕ್ಕೆ ವಿವಿಧ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ‌ ಒಗ್ಗಟ್ಟು ಇರಬೇಕು. ಬೇರೆ ಎಲ್ಲ ಸಮುದಾಯಗಳನ್ನು ಪ್ರೀತಿಯಿಂದ ಕಾಣುವ ಮೂಲಕ ಸಮಾಜದ ಸಂಘಟನೆ ಮಾಡಬೇಕು ಎಂದರು.

ಉತ್ತರ ರಾಜ್ಯಾಧ್ಯಕ್ಷರಾದ ಮರೆಪ್ಪ ನಾಯಕ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋಗಲು ಅಕ್ಷರ ಜ್ಞಾನವೇ ಮೊದಲ ಮೆಟ್ಟಿಲು. ಕಾರಣ, ವಿದ್ಯಾರ್ಥಿ‌ ಜೀವನದಲ್ಲಿ ಬೇರೆ ಏನ್ನನ್ನೂ ಮಾಡದೇ ಕೇವಲ ಓದಿಗಾಗಿ ಸಮಯ ಮಿಸಲಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಜಿಲ್ಲಾಧ್ಯಕ್ಷ ದೇವಿಂದ್ರಪ್ಪಗೌಡ ಆಲ್ದಾಳ ಮಾತನಾಡಿ, ವಾಲ್ಮೀಕಿ ಸಮಾಜ ಶೂರ, ವೀರ ಮತ್ತು ಧೀರ ವ್ಯಕ್ತಿಗಳನ್ನು ಹೊಂದಿದೆ. ಬಡತನದ ನೆಪ ಮುಂದೆ ಮಾಡಿ ನಮ್ಮ‌ ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೆಲಸ ಹಚ್ಚುವುದನ್ನು ಪಾಲಕರು ಬೀಡಬೇಕು. ಸರ್ಕಾರ ನಮಗಾಗಿಯೇ ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣಕ್ಕಾಗಿ ಅನೇಕ ಸೌಲಭ್ಯಗಳನ್ನು‌ ನೀಡಿದೆ. ಅವುಗಳ ಸದುಪಯೋಗ ಪಡೆದು ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು‌ ಪಡೆಯಬೇಕು ಎಂದು ಹೇಳಿದರು.

ಅಹಿಂದ ಘಟಕದ ಅಧ್ಯಕ್ಷ ಹಣಮೇಗೌಡ ಬಿರನಕಲ್ ಮಾತನಾಡಿದರು.

ಇದೇ ವೇಳೆ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಸುಮಾರು 100 ಅಧಿಕ ವಿದ್ಯಾರ್ಥಿಗಳಿಗೆ, ಸಮಾಜದ ಶಿಕ್ಷಕರನ್ನು ಹಾಗೂ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ಶ್ರೀಧರ ಪಾಟೀಲ್, ಭೀಮರಾಯ ಠಾಣಾಗುಂದಿ, ಹಸಿರು ಸೇವೆ ರಾಜ್ಯ ಉಪಾಧ್ಯಕ್ಷ ಕಾಂತು ಪಾಟೀಲ್, ಎಸ್.ಎಸ್.ನಾಯಕ, ಬಿಜೆಪಿ ಯುವ ಘಟಕದ ಅಧ್ಯಕ್ಷ ಶ್ರೀಧರ್ ಸಾಹುಕಾರ, ಸುರಪುರ ತಾಲೂಕು ಮರೆಪ್ಪ‌ ಪ್ಯಾಟಿ, ರಮೇಶ ದೊರೆ, ಜಿಲ್ಲಾಧ್ಯಕ್ಷ ಬಿ.ಬಿ.ನರಸಪ್ಪ ನಾಯಕ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದರ್ಶನ ನಾಯಕ, ನಗರಸಭೆ ಸದಸ್ಯ ಹಣಮಂತ ನಾಯಕ, ಮಹಾವೀರ ನಾಯಕ, ಸಮಾಜ‌ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ, ಬಸಲಿಂಗಪ್ಪ ಹುಲಕಲ್, ಬಸವರಾಜ ನೀಲಹಳ್ಳಿ, ಎಸ್.ಎಸ್.ನಾಯಕ, ಜನಾರ್ಧನ ನಾಯಕ, ಸುಭಾಶನಾಯಕ, ಜನಾರ್ಧನ, ಬಸವರಾಜ ನೀಲಹಳ್ಳಿ, ಮೋನಪ್ಪ ಹಳಿಗೇರಿ, ಆಂಜನಯ್ಯ ಮಲ್ಹಾರ್, ಹಣಮಂತ ಖಾನಳ್ಳಿ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ವಾಲ್ಮೀಕಿ ವೃತ್ತದಿಂದ ಕಾರ್ಯಕ್ರಮದ ವೇದಿಕೆಯವರೆಗೂ ಅದ್ಧೂರಿ ಮೆರವಣಿಗೆ ನಡೆಯಿತು.