ಸಾರಾಂಶ
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆದಿ ಕರ್ನಾಟಕ ಸಂಘದ ಸದಸ್ಯ ಜಿಪಂ ನಿವೃತ್ತ ಲೆಕ್ಕ ಪರಿಶೋಧಕ ಆಧಿಕಾರಿ ಚಿಕ್ಕಬಸವಯ್ಯ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಡಿಟ್ ಸ್ಥಳೀಯ ಲೆಕ್ಕ ಪರಿಶೋಧಕರಿಂದಲೇ ಮಾತ್ರ ಸತ್ಯಾಂಶ ಗೊತ್ತಾಗಲಿದೆ ಎಂದು ಸಂಘದ ಸದಸ್ಯ ಜಿಪಂ ನಿವೃತ್ತ ಲೆಕ್ಕ ಪರಿಶೋಧಕ ಅಧಿಕಾರಿ ಚಿಕ್ಕಬಸವಯ್ಯ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೩ರಿಂದ ಆದಿಕರ್ನಾಟಕ ಅಭಿವೃದ್ಧಿ ಸಂಘದ ಸುಪರ್ದಿಗೆ ಬಂದ ಹರಿಜನ ವಿದ್ಯಾರ್ಥಿ ನಿಲಯ ನಂತರ ನಡೆದ ಸುಮಾರು ೩ ಕೋಟಿ ೬೮ ಲಕ್ಷದ ವಹಿವಾಟಿನ ಬಗ್ಗೆ ನಿಜಾಂಶ ಗೊತ್ತಾಗಬೇಕಾದರೆ ಸ್ಥಳೀಯ ಲೆಕ್ಕ ಪರಿಶೋಧಕರಿಂದಲೇ ಆಗಬೇಕು ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಸಮಾಜದ ಹಿರಿಯರಾದ ಕೆ.ಸಿ. ರಂಗಯ್ಯ, ಬಾಗಳಿ ಪುಟ್ಟಸ್ವಾಮಿ, ಹೆಗ್ಗವಾಡಿ ರಂಗಸ್ವಾಮಿ, ಬಿ. ರಾಚಯ್ಯ ಅವರ ಪರಿಶ್ರಮದಿಂದ ಹರಿಜನ ವಿದ್ಯಾರ್ಥಿ ನಿಲಯ ಸ್ಥಾಪನೆಯಾಗಿ ನಾನು ಸೇರಿದಂತೆ ಸಾವಿರಾರು ಮಂದಿ ಈ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿ ಜೀವನವನ್ನು ಕಟ್ಟಿಕೊಂಡಿದ್ದೇವೆ ಎಂದರು. ನಾವು ಮೂಲತ: ಚಾಮರಾಜನಗರ ತಾಲೂಕಿನವರೇ ಆಗಿದ್ದು, ಕಳೆದ ೨ ವರ್ಷದ ಹಿಂದೆ ನಾವು ೪೩ ಜನರು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಸದಸ್ಯರಾಗಲು ಅರ್ಜಿ ಸಲ್ಲಿಸಿದ್ದೆವು. ಈಗ ನಮಗೆ ಸದಸ್ಯತ್ವ ಕೊಟ್ಟಿದ್ದಾರೆ ಎಂದರು. ಸಂಘದ ನಿರ್ದೇಶಕರಾಗಿದ್ದ ಬಾಗಳಿ ಪುಟ್ಟಸ್ವಾಮಿ ೧೯೯೭ರಲ್ಲಿ ಮರಣ ಹೊಂದಿದ್ದಾರೆ, ಆದರೆ ಅವರ ಸಹಿ ೨೦೦೭ರವರೆಗೂ ಸಂಘದ ರಿಜಿಸ್ಟ್ರರ್ ಪುಸಕ್ತದಲ್ಲಿ ಆಗಿರುವುದು ಅನುಮಾನಕ್ಕೀಡು ಮಾಡಿದೆ ಎಂದರು.
ವಿದ್ಯಾರ್ಥಿ ನಿಲಯವನ್ನು ಎಂಜಿನಿಯರಿಂಗ್ ಕಾಲೇಜಿನವರಿಗೆ ಮಾಸಿಕ ೪೯,೨೧೪ ರು. ನಂತೆ ಬಾಡಿಗೆ ಕೊಟ್ಟಿದ್ದು, ಅದು ಸುಮಾರು ೭೪,೩೧,೩೧೪ ರು. ಬಂದಿದೆ, ಬಿಸಿಎಂ ಇಲಾಖೆಯಿಂದ ವಿದ್ಯಾರ್ಥಿಗಳ ಊಟಕ್ಕಾಗಿ ಎಂದು ಸುಮಾರು ೮ ಲಕ್ಷಕ್ಕೂ ಹೆಚ್ಚು ಅನುದಾನವನ್ನು ಪಡೆಯಾಗಿದೆ, ಸಂಘದ ಹಣವನ್ನು ಖಾಸಗಿ ಸಿದ್ಧಾರ್ಥ ಕಾಲೇಜಿನ ಆಡಳಿತ ಮಂಡಳಿಗೆ ಚೆಕ್ ಮೂಲಕ ೩ ಲಕ್ಷ ನೀಡಲಾಗಿದೆ, ಇದು ಸಾರ್ವಜನಿಕ ಹಣ ದುರುಪಯೋಗವಾಗಿದೆ ಎಂದರು.ಈ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಬಾಡಿಗೆಗೆ ಎಂದು ಬಂದ ಆದಿ ಕರ್ನಾಟಕ ಸಂಘ ನಂತರ ನಿಲಯವನ್ನು ಸುಪರ್ದಿಗೆ ಪಡೆದು ೨೦೧೩ರ ನಂತರ ಸುಮಾರು ೩ ಕೋಟಿ ೬೮ ಲಕ್ಷದ ವಹಿವಾಟು ನಡೆದಿದ್ದು ಈ ಬಗ್ಗೆ ಆಡಿಟ್ ನಡೆಸಿ, ನಿಜಾಂಶ ಹೊರಬರಬೇಕು, ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.