ಭದ್ರತಾ ಠೇವಣಿ ವಸೂಲಿಗೆ ನೀಡಿದ ನೋಟಿಸ್ ವಾಪಸ್ ಪಡೆಯಿರಿ

| Published : Oct 01 2024, 01:22 AM IST

ಭದ್ರತಾ ಠೇವಣಿ ವಸೂಲಿಗೆ ನೀಡಿದ ನೋಟಿಸ್ ವಾಪಸ್ ಪಡೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಹೆಚ್ಚುವರಿ ಭದ್ರತಾ ಠೇವಣಿ ವಸೂಲಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ತಕ್ಕಂತೆ ಟಿಸಿ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ನೇಕಾರರ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ಸೋಮವಾರ ನಗರದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ದೊಡ್ಡಬಳ್ಳಾಪುರ: ಹೆಚ್ಚುವರಿ ಭದ್ರತಾ ಠೇವಣಿ ವಸೂಲಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ತಕ್ಕಂತೆ ಟಿಸಿ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ನೇಕಾರರ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ಸೋಮವಾರ ನಗರದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಪಿ.ಎ.ವೆಂಕಟೇಶ್ ಮಾತನಾಡಿ, ಹೆಚ್ಚುವರಿ ಭದ್ರತಾ ಠೇವಣಿಯನ್ನು 30 ದಿನಗಳ ಒಳಗಾಗಿ ಪಾವತಿ ಮಾಡದೆ ಇದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕುರಿತು ನೋಟಿಸ್ ನೀಡಿರುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದೆ. ಎಎಸ್ಡಿ ಹಣ ಪಾವತಿ ಮಾಡಿದರೆ ಮಾತ್ರ ಇತರೆ ಕೆಲಸಗಳನ್ನು ಮಾಡಿಕೊಡುವುದು ಎನ್ನುವ ಬೆಸ್ಕಾಂ ಸಿಬ್ಬಂದಿಯ ಧೋರಣೆ ಖಂಡನೀಯ ಎಂದರು.

ನಗರದಲ್ಲಿ 35 ಸಾವಿರ ವಿದ್ಯುತ್ ಮಗ್ಗಗಳು ಇದ್ದು, ಸುಮಾರು 20 ಸಾವಿರ ಜನ ಇದೇ ಉದ್ಯೋಗವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ನಗರದ ಆರ್ಥಿಕ ಪ್ರಗತಿಯ ಕೇಂದ್ರವಾಗಿರುವ ನೇಕಾರಿಕೆ ಉದ್ಯಮಕ್ಕೆ ಉತ್ತೇಜನ ನೀಡುವ ಬದಲಿಗೆ ಬೆಸ್ಕಾಂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನಾನಾ ರೀತಿಯ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂದು ದೂರಿದರು. ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಕರೇನಹಳ್ಳಿ, ಭುವನೇಶ್ವರಿನಗರ, ಶ್ರೀನಗರ, ಖಾಸ್‌ಬಾಗ್‌, ದರ್ಗಾಜೋಗಿಹಳ್ಳಿ, ಶಾಂತಿನಗರ, ಮುತ್ತೂರು, ಸಿದ್ದೇನಾಯ್ಕನಹಳ್ಳಿ, ವಿದ್ಯಾನಗರ ಸೇರಿದಂತೆ ನಗರದ ಅಂಚಿನ ಭಾಗದಲ್ಲಿಯೇ ಹೆಚ್ಚಿನ ನೇಕಾರಿಕೆ ಇರುವುದು. ಇಲ್ಲಿ ಹೆಚ್ಚುವರಿ ವಿದ್ಯುತ್ ಸಂಪರ್ಕಗಳ ಬೇಡಿಕೆ ಇರುವುದರಿಂದ ಈ ಪ್ರದೇಶಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು. ಈ ಬಗ್ಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ನೇಕಾರರ ಮನವಿಯನ್ನು ಸ್ವೀಕರಿಸಿದ ಬೆಸ್ಕಾಂ ಗ್ರಾಮಾಂತರ ಜಿಲ್ಲೆ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್‌ ಪ್ರತಿಕ್ರಿಯಿಸಿ, ಅಧಿಕಾರಿಗಳು ಹೆಚ್ಚುವರಿ ಭದ್ರತಾ ಠೇವಣಿಯನ್ನು ಗ್ರಾಹಕರಿಂದ ಒತ್ತಾಯಪೂರ್ವಕವಾಗಿ ವಸೂಲಿ ಮಾಡುವುದಿಲ್ಲ. ಈ ಬಗ್ಗೆ ವಿದ್ಯುತ್ ಗ್ರಾಹಕರ ಸಭೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಬೆಸ್ಕಾಂ ನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿನಯ್‌ಕುಮಾರ್, ಸಹಾಯಕ ಎಂಜಿನಿಯರ್ ರಾಜಪ್ಪ ಇದ್ದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಆರ್.ಚಂದ್ರತೇಜಸ್ವಿ, ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ಸಿ.ಸುರೇಶ್, ಆರ್.ಎಸ್.ಶ್ರೀನಿವಾಸ, ಸಹ ಕಾರ್ಯದರ್ಶಿ ಎಂ.ಮುನಿರಾಜು, ಕೆ.ಚೌಡಯ್ಯ, ರಘುಕುಮಾರ್, ಸಿ.ಅಶ್ವತ್, ಸದಾಶಿವಪ್ಪ, ಲಕ್ಷ್ಮಿಪತಿ, ಗಿರೀಶ್, ಕುಮಾರ್ ಹಾಗೂ ನೂರಾರು ಜನ ನೇಕಾರರು ಇದ್ದರು.