ಸಾರಾಂಶ
ಮಕ್ಕಳು ಉತ್ತಮವಾದ ಶಿಕ್ಷಣ ಪಡೆದುಕೊಂಡು ಅಭಿವೃದ್ಧಿಯತ್ತ ಸಾಗಬೇಕು.
ಕನ್ನಡಪ್ರಭ ವಾರ್ತೆ ಕುಷ್ಟಗಿ
ಮಕ್ಕಳು ಉತ್ತಮವಾದ ಶಿಕ್ಷಣ ಪಡೆದುಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಆರು ನೂತನ ಕೊಠಡಿಗಳ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸುಮಾರು ₹1.14 ಕೋಟಿ ವೆಚ್ಚದಲ್ಲಿ ಆರು ಕೊಠಡಿಗಳು ನಿರ್ಮಾಣವಾಗುತ್ತಿದ್ದು, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ಗ್ರಾಮಸ್ಥರು ನಮ್ಮೂರ ಶಾಲೆ, ನಮ್ಮ ಶಾಲೆ ಎಂದು ಭಾವಿಸಬೇಕು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ, ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಬಿಜಕಲ್ ಗ್ರಾಮದ ನಿವಾಸಿ ಗೋಪಾಲರಾವ ಕುಲಕರ್ಣಿ ಭೂಮಿ ದಾನವನ್ನಾಗಿ ನೀಡಿರುವುದು ಶ್ಲಾಘನೀಯ ಎಂದರು.
ಬಿಜಕಲ್ ಸರ್ಕಾರಿ ಪ್ರೌಢಶಾಲಾ ನಿರ್ಮಾಣಕ್ಕಾಗಿ ಭೂಮಿ ದಾನ ನೀಡಿದ ಗೋಪಾಲರಾವ ರಾಮರಾವ್ ಕುಲಕರ್ಣಿ ಅವರನ್ನು ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಸೇರಿದಂತೆ ಅನೇಕರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭ ಬಿಇಒ ಸುರೇಂದ್ರ ಕಾಂಬಳೆ, ಗ್ರಾಪಂ ಅಧ್ಯಕ್ಷ ಗೌಡಪ್ಪಗೌಡ, ಪಿಡಿಒ ಆನಂದರಾವ ಕುಲಕರ್ಣಿ, ಗ್ರಾಪಂ ಸದಸ್ಯರು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.