ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಮನುಷ್ಯನ ದೇಹದ ಅಮೂಲ್ಯ ಅಂಗ ಕಣ್ಣಿನ ಬಗ್ಗೆ ನಿರ್ಲಕ್ಷಿಸದೆ ಕಣ್ಣಿಗೆ ಪೊರೆ ಬಂದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿಸಿ ಗುಣಪಡಿಸಿಕೊಳ್ಳಬೇಕು ಎಂದು ನೇತ್ರತಜ್ಞ ರಾಮು ತಿಳಿಸಿದರು.ಹೋಬಳಿಯ ಲಯನ್ಸ್ ಕ್ಲಬ್ ಆವರಣದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಮತ್ತು ಮೈಸೂರು ರೇಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಮಾತನಾಡಿದದರು.
ಆಸ್ಪತ್ರೆಯಲ್ಲಿ ಇದುವರೆಗೂ ಉತ್ತಮ ಸೇವೆ ಮಾಡುತ್ತಾ ಬಂದಿದ್ದು, ಶಿಬಿರಗಳನ್ನು ನಡೆಸಿ ಅವಶ್ಯಕತೆ ಇರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಕನ್ನಡಕ ಹಾಗೂ ಒಂದು ವಾರಕ್ಕೆ ಅವಶ್ಯಕತೆ ಇರುವ ಔಷಧಿ ನೀಡುತ್ತೇವೆ. ಇದರ ಸದ್ಬಳಕೆ ಮಾಡಿಕೊಂಡು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ ಎಂದರು.ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಇರುವವರು ಸಹ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಅವಶ್ಯಕ. ನಮಗೆ ವಯಸ್ಸಾದಂತೆ ನೇತ್ರಗಳಿಗೂ ವಯಸ್ಸಾಗುತ್ತದೆ. ಅದರಲ್ಲಿ ಪೊರೆ ಕಾಣಿಸಿಕೊಳ್ಳುತ್ತದೆ. ಅದನ್ನು ನಿರ್ಲಕ್ಷಿಸಿದೆ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್ ಮಾತನಾಡಿ, ಗ್ರಾಮೀಣ ಜನರಿಗಾಗಿ ಸಂಸ್ಥೆಯಿಂದ ಸುಮಾರು 40 ವರ್ಷಗಳಿಂದ ಇಂತಹ ಶಿಬಿರಗಳನ್ನು ನಡೆಸಲಾಗುತ್ತಿದೆ. ಪಟ್ಟಣದ ಖಾಸಗಿ ಆಸ್ಪತ್ರೆಗೆ ಹೋಗಿ ಹೆಚ್ಚು ಹಣ ವೆಚ್ಚ ಮಾಡುವುದಕ್ಕಿಂತ ಇಂತಹ ಶಿಬಿರಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಮುಗ್ಗಟ್ಟನ್ನು ಸಹ ನಿವಾರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.ಪರಿಸರ ಉಳಿಸಲು ಆಸ್ಪತ್ರೆ ಹಾಗೂ ಶಾಲಾ ಆವರಣಗಳಲ್ಲಿ ಗಿಡಗಳನ್ನು ನೆಟ್ಟು ಮರವನ್ನು ಬೆಳೆಸಬೇಕು. ಸಂಸ್ಥೆ ಎಲ್ಲಾ ಸದಸ್ಯರ ಸಹಕಾರದೊಡನೆ ಪರಿಸರ ಉಳಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಶಿಬಿರದಲ್ಲಿ 97 ಮಂದಿಯ ತಪಾಸಣೆ ನಡೆಸಿ, 20 ಜನರಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವುದರಿಂದ ಮೈಸೂರಿನ ಎಂ.ಆರ್.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದರು.ಈ ವೇಳೆ ವೈದಾಧಿಕಾರಿಗಳಾದ ಸೋಮನಾಯಕ್, ಮಹಾದೇವಸ್ವಾಮಿ, ಸಂಸ್ಥೆ ಕಾರ್ಯದರ್ಶಿ ಡಿ.ಎಲ್.ಮಾದೇಗೌಡ, ಖಜಾಂಜಿ ಶಿವರಾಜು, ಸದಸ್ಯರಾದ ಡಾ.ನಾಗೇಶ್, ಡಾ.ಶಂಷುದ್ದೀನ್, ಎಚ್.ಆರ್.ಪದ್ಮನಾಭ, ನಿವೃತ್ತ ಮುಖ್ಯ ಶಿಕ್ಷಕ ದೇವರಾಜು, ಮನೋಹರ, ಎಚ್. ಎಸ್. ಶ್ರೀನಿವಾಸ ಚಾರಿ, ಗುಣೇಶ, ಮತ್ತು ಇತರರು ಇದ್ದರು.