ಸಾರಾಂಶ
ಕತ್ತಲೆಯನ್ನು ಕಳೆಯುವ ಶಕ್ತಿ ಜ್ಞಾನಕ್ಕಿದ್ದು ಯುವ ಪೀಳಿಗೆ ಶಿಕ್ಷಣ ಪಡೆದು ಜ್ಞಾನವಂತರಾಗಿ ಸಮಾಜವನ್ನು ತಿದ್ದುವ ಜೊತೆಗೆ ಉತ್ತಮ ಪ್ರಜೆಗಳಾಗಿ ದೇಶಕಟ್ಟುವ ಕಾರ್ಯದಲ್ಲಿ ತಲ್ಲೀನರಾಗಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ಕತ್ತಲೆಯನ್ನು ಕಳೆಯುವ ಶಕ್ತಿ ಜ್ಞಾನಕ್ಕಿದ್ದು ಯುವ ಪೀಳಿಗೆ ಶಿಕ್ಷಣ ಪಡೆದು ಜ್ಞಾನವಂತರಾಗಿ ಸಮಾಜವನ್ನು ತಿದ್ದುವ ಜೊತೆಗೆ ಉತ್ತಮ ಪ್ರಜೆಗಳಾಗಿ ದೇಶಕಟ್ಟುವ ಕಾರ್ಯದಲ್ಲಿ ತಲ್ಲೀನರಾಗಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘ ಹಾಗೂ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಟ್ಟಿದ್ದೇನೆ ಎಂಬುದನ್ನು ಅರಿತು ಸಮಾಜ ಋಣ ತೀರಿಸಬೇಕು. ತಂದೆ ತಾಯಿಗಳು ತಮ್ಮ ಕಷ್ಟಗಳನ್ನು ಬದಿಗಿಟ್ಟು ನಿಮಗೆ ಶಿಕ್ಷಣ ಕೊಡಿಸುತ್ತಿದ್ದು ಅದಕ್ಕೆ ಬೆಲೆಕೊಟ್ಟು ಉತ್ತಮ ಶಿಕ್ಷಣ ಪಡೆದು ಗುರು ಹಿರಿಯರಿಗೆ ಗೌರವ ಕೊಡುವ ಮೂಲಕ ಮನೆಗೆ ಒಳ್ಳೆ ಮಕ್ಕಳಾಗಿ ದೇಶಕ್ಕೆ ಬೆಳಕಾಗಬೇಕು. ಅಮೇರಿಕ ಅಧ್ಯಕ್ಷ ಟ್ರಂಪ್ ನಮ್ಮ ದೇಶ ಕಂಡರೆ ಹೆದರುತ್ತಾರೆ ಏಕೆಂದರೆ ಭವಿಷ್ಯ ಬದಲಾಯಿಸುವ ಯುವಶಕ್ತಿ ನಮ್ಮಲ್ಲಿದ್ದಾರೆ. ವಿದ್ಯಾರ್ಥಿಗಳು ವಿದ್ಯಾವಂತರಾಗದೆ ನೀವು ಓದಿದನ್ನು ಸದ್ವಿನಿಯೋಗಿಸಿಕೊಳ್ಳುವ ಕಲೆ, ಕೌಶಲ್ಯ ಬೆಳೆಸಿಕೊಳ್ಳಬೇಕು. ಶ್ರೀಮಠವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ದತ್ತಿನಿಧಿ ಯೋಜನೆಯ ಮೂಲಕ ೪೫ಲಕ್ಷರು ದತ್ತಿಯಿಟ್ಟು ಮಕ್ಕಳ ಮುಂದಿನ ಶೈಕ್ಷಣಿಕ ಓದಿಗೆ ಪ್ರೋತ್ಸಾಹಿಸುತ್ತಿದೆ. ಯಾವುದೇ ಸಮಾಜವಾಗಲಿ ದೋಷ, ದ್ವೇಷ, ಓರೆಕೊರೆಗಳನ್ನು ತಿದ್ದಿಕೊಂಡು ತಮ್ಮ ಸಮಾಜದ ಅಭಿವೃದ್ದಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಶ್ರಮಿಸಿದಾಗ ಆ ಸಮಾಜವು ಅಭಿವೃದ್ದಿಯಾಗುವ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ. ಷಡಕ್ಷರಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಶಿಕ್ಷಣದಿಂದ ಮಾತ್ರ ಸಮಾಜ ತಿದ್ದಲು ಸಾಧ್ಯ. ಸರ್ಕಾರ ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ನೀಡಲು ಹಲವಾರು ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ಜೊತೆಗೆ ಮಠಮಾನ್ಯಗಳು ಸಹ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿವೆ. ಸರ್ಕಾರ ಇದೀಗ ಜಾತಿಗಣತಿ ಪ್ರಾರಂಭಿಸುತ್ತಿದ್ದು ಇದನ್ನು ರಾಜಕೀಯವಾಗಿ ತೆಗೆದುಕೊಳ್ಳದೆ ತಾಲೂಕಿನ ನಾಲ್ಕು ಹೋಬಳಿಯಲ್ಲಿಯೂ ಜಾತಿಗಣತಿ ಬಗ್ಗೆ ಕಾರ್ಯಕ್ರಮ ರೂಪಿಸಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ಚಿದಾನಂದ್ ಮಾತನಾಡಿ ಸಮಾಜದ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆ ಮೂಲಕ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು ಮಕ್ಕಳು ಚೆನ್ನಾಗಿ ಓದಿ ಸಮಾಜಕ್ಕೆ ಕೊಡುಗೆ ನೀಡಬೇಕು. ತಾಲೂಕು ಸಂಘ ಮತ್ತಷ್ಟು ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸಲಿದೆ ಎಂದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದಾನಿಗಳಿಗೆ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ದಸರಿಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ತಾರಾಮಣಿ, ಶ್ರೀರಂಗ ಆಸ್ಪತ್ರೆಯ ವೈದ್ಯಾಧಿಕಾರಿ ಜಿ.ಬಿ.ವಿವೇಚನ್, ಮುಖಂಡ ಕೆ.ಟಿ.ಶಾಂತಕುಮಾರ್, ಪ್ರತಿಭಾ ಪುರಸ್ಕಾರ ಸಮಿತಿಯ ಅಧ್ಯಕ್ಷ ದೇವಾನಂದ್, ದೇವರಾಜು, ಪ್ರಧಾನ ಕಾರ್ಯದರ್ಶಿ ಬಸವರಾಜು, ಆಡಿಟರ್ ನಾಗರಾಜು, ನೇಗಿಲಯೋಗಿ ಸಮಿತಿಯ ರವಿಕುಮಾರ್ ಮತ್ತಿತರರಿದ್ದರು.ಬಾಕ್ಸ್ : ರಾಜ್ಯ ಸರ್ಕಾರ ಸರ್ವಾಂಗೀಣ ಜಾತಿ ಗಣತಿ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದು ಸಮಾಜದ ಬಂಧುಗಳು ವಸ್ತುನಿಷ್ಠ ವರದಿಯನ್ನು ಗಣತಿ ಮಾಡಲು ಬರುವ ಅಧಿಕಾರಿಗಳಿಗೆ ತಿಳಿಸಬೇಕು. ನೀವು ಎಷ್ಟು ಸರಿಯಾದ ಮಾಹಿತಿ ನೀಡುತ್ತೀರೋ ಅಷ್ಟೇ ಸೌಲಭ್ಯವನ್ನು ಪಡೆದು ಸಮಾಜದ ಅಭಿವೃದ್ಧಿಯಾಗಲಿದೆ. ಜಾತಿಗಣತಿ ವೇಳೆ ೬೦ ಅಂಶಗಳ ಕಾಲಂ ನೀಡುತ್ತಿದ್ದು ನೀವು ನಿಖರ ಮಾಹಿತಿ ನೀಡಿದರೆ ಮುಂದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸ್ಪಷ್ಟವಾಗಿ ತಿಳಿದು ಯೋಜನೆ ರೂಪಿಸಲು ಅನುಕೂಲವಾಗಲಿದೆ. - ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಹಾಸಂಸ್ಥಾನ ಮಠ.