ನಿಮಗೇನು ಸೌಕರ್ಯಗಳು ಬೇಕು ಕೇಳ್ರೀ. ನಾವ್ ಒದಗಿಸಿಕೊಡ್ತೀವಿ. ನಿಮ್ಮಿಂದ ನಾವೇನೂ ನಿರೀಕ್ಷೆ ಮಾಡೋದಿಲ್ಲ.

ಬಳ್ಳಾರಿ: ನಿಮಗೇನು ಸೌಕರ್ಯಗಳು ಬೇಕು ಕೇಳ್ರೀ. ನಾವ್ ಒದಗಿಸಿಕೊಡ್ತೀವಿ. ನಿಮ್ಮಿಂದ ನಾವೇನೂ ನಿರೀಕ್ಷೆ ಮಾಡೋದಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ತನ್ನಿ. ನಮ್ಮ ಜಿಲ್ಲೆಗೆ ಹಾಗೂ ನಿಮ್ಮನ್ನೇ ನಂಬಿಕೊಂಡಿರುವ ಪೋಷಕರ ಆಸೆ ಈಡೇರಿಸಿ...

ಕಳೆದ ಒಂದು ದಶಕದಿಂದ ಆರೋಗ್ಯ, ಶಿಕ್ಷಣ, ಪರಿಸರ ಕ್ಷೇತ್ರದಲ್ಲಿ ಸದ್ದಿಲ್ಲದೇ ಸೇವಾ ನಿರತರಾಗಿರುವ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬಳಿ ಇಟ್ಟಿರುವ ವಿನಮ್ರ ಬೇಡಿಕೆಯಿದು.

ಪ್ರತಿ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಂಗ್ಲೀಷ್, ವಿಜ್ಞಾನ, ಗಣಿತ ವಿಷಯದಲ್ಲಿ ಅನುತ್ತೀರ್ಣಗೊಳ್ಳುತ್ತಿರುವುದರಿಂದ ಈ ಮೂರು ವಿಷಯಗಳ ಜೊತೆಗೆ ಕಂಪ್ಯೂಟರ್ ಜ್ಞಾನ ವಿಸ್ತರಿಸಲು ವಿಷಯತಜ್ಞರಿಂದ ಪ್ರತಿ ಭಾನುವಾರ ವಿಶೇಷ ತರಬೇತಿ ಹಾಗೂ ಉಪನ್ಯಾಸ (ಸ್ಪೆಷಲ್ ಕ್ಲಾಸ್‌) ನೀಡಲಾಗುತ್ತಿದೆ. ಕಳೆದ 15 ದಿನಗಳಿಂದ ತರಬೇತಿ ಶುರುಗೊಂಡಿದ್ದು, 80ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಭಾಗವಹಿಸುತ್ತಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಆದ್ಯತೆಯಾಗಿ ನೀಡಿ ಆರಂಭಿಸಿರುವ ವಿಶೇಷ ಉಪನ್ಯಾಸಕ್ಕೆ ನಗರದ ವಿಷಯತಜ್ಞರು ಉಚಿತ ಸೇವೆ ನೀಡುತ್ತಿದ್ದಾರೆ. ಬೆಳಿಗ್ಗೆ 9.30ರಿಂದ ಶುರುಗೊಳ್ಳುವ ತರಬೇತಿ ಸಂಜೆ 5 ಗಂಟೆವರೆಗೆ ನಡೆಯಲಿದೆ. ತರಬೇತಿ ನೀಡಿಕೆಯ ಮುಖ್ಯ ಆಶಯ ವಿವರಿಸಿದ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್, ನಾವು ವಿದ್ಯಾರ್ಥಿಗಳನ್ನು ಕೇಳೋದು ಇಷ್ಟೇ. ನಾವು ಓದುವ ವಾತಾವರಣ, ಪೂರಕ ಸೌಲಭ್ಯ ಕಲ್ಪಿಸಿಕೊಡುತ್ತೇವೆ. ಉತ್ತಮ ಫಲಿತಾಂಶ ತನ್ನಿ ಎಂದಷ್ಟೇ ಕೇಳಿಕೊಳ್ಳುತ್ತಿದ್ದೇವೆ ಎಂದರು.

ಕನ್ನಡಪ್ರಭ ಜತೆ ಮಾತನಾಡಿದ ಅವರು, ಯಾರಿಂದಲೂ ಆರ್ಥಿಕ ನೆರವು ಪಡೆಯದೇ ಸನ್ಮಾರ್ಗದ ಗೆಳೆಯರ ಬಳಗದ ಸದಸ್ಯರೇ ಇಂತಿಷ್ಟೆಂದು ಹಣ ಸಂಗ್ರಹಿಸಿ ಒಂದು ದಶಕದಿಂದ ಆರೋಗ್ಯ, ಶಿಕ್ಷಣ, ಪರಿಸರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಪ್ರತಿವರ್ಷ ಬಳ್ಳಾರಿ ಸೇರಿ ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಗಾರ ನಡೆಸುತ್ತಾ ಬಂದಿದ್ದು, ಬಳ್ಳಾರಿ ಸುತ್ತಮುತ್ತ ಗ್ರಾಮೀಣ ಪ್ರದೇಶದ ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ಅನುಕೂಲವಾಗಲೆಂದು ಸನ್ಮಾರ್ಗ ಕಚೇರಿಯಲ್ಲಿ ತರಬೇತಿ ಆರಂಭಿಸಿದ್ದೇವೆ ಎಂದರು.

ಸನ್ಮಾರ್ಗ ಗೆಳೆಯರ ಬಳಗ ಹೆಸರಿನಲ್ಲಿ ಸಮಾನ ಮನಸ್ಕರು ಸಮಾಜ ಸೇವೆ ಕಾರ್ಯದಲ್ಲಿ ಒಂದು ದಶಕದಿಂದ ಪರಿಸರ, ಶಿಕ್ಷಣ, ಆರೋಗ್ಯ ಸಂಬಂಧಿ ಸೇವೆಯಲ್ಲಿ ನಿರತರಾಗಿದ್ದಾರೆ. ತೋರಣಗಲ್ ಡಿವೈಎಸ್ಪಿ ಪ್ರಸಾದ ಗೋಖಲೆ ಬಳಗದ ಸಂಸ್ಥಾಪಕ. 2015ರಲ್ಲಿ ಅಸ್ವಿತ್ವಕ್ಕೆ ಬಂದಿರುವ ಸನ್ಮಾರ್ಗ ಗೆಳೆಯರ ಬಳಗ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಲಕ್ಷ್ಮಿಕಾಂತ ರೆಡ್ಡಿ ಬಳಗದ ಅಧ್ಯಕ್ಷರಾಗಿ ಸೇವಾ ಕೈಂಕರ್ಯದ ಸಾರಥ್ಯ ವಹಿಸಿಕೊಂಡಿದ್ದಾರೆ. ಶಿಕ್ಷಕರು, ವೈದ್ಯರು, ಕಲಾವಿದರು, ಪತ್ರಕರ್ತರು, ಉದ್ಯಮಿಗಳು, ಅಧಿಕಾರಿಗಳು ಬಳಗದಲ್ಲಿದ್ದಾರೆ.