ಅರಣ್ಯಭೂಮಿ ಅತಿಕ್ರಮಣ ಜಾಗದ ಜಿಪಿಎಸ್ ಕಾರ್ಯ ಮಾಡಿಸಿಕೊಡಿ

| Published : Mar 03 2025, 01:45 AM IST

ಸಾರಾಂಶ

ಅರಣ್ಯಭೂಮಿ ಅತಿಕ್ರಮಣದಾರರು ವಾಸಿಸುತ್ತಿರುವ ಭೂಮಿಯ ಜಿಪಿಎಸ್ ಸರ್ವೆ ಕಾರ್ಯ ಮಾಡಿಸಿಕೊಡಬೇಕು

ಭಟ್ಕಳ: ತಾಲ್ಲೂಕಿನ ಅರಣ್ಯಭೂಮಿ ಅತಿಕ್ರಮಣದಾರರು ವಾಸಿಸುತ್ತಿರುವ ಭೂಮಿಯ ಜಿಪಿಎಸ್ ಸರ್ವೆ ಕಾರ್ಯ ಮಾಡಿಸಿಕೊಡಬೇಕು ಎಂದು ತಾಲ್ಲೂಕು ಅರಣ್ಯಭೂಮಿ ಹೋರಾಟಗಾರರ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಭಟ್ಕಳ ತಾಲ್ಲೂಕಿನಲ್ಲಿ 10 ಸಾವಿರಕ್ಕೂ ಅಧಿಕ ಅರಣ್ಯಭೂಮಿ ಅತಿಕ್ರಮಣದಾರರಿದ್ದು, ಇದರಲ್ಲಿ ಹೆಚ್ಚಿನವರು ವಾಸಿಸುತ್ತಿರುವ ಅರಣ್ಯಭೂಮಿ ಜಿಪಿಎಸ್ ಸರ್ವೆ ಕಾರ್ಯ ಮಾಡಿಸುವುದು ಬಾಕಿ ಇದೆ. ಜಿಪಿಎಸ್ ಸರ್ವೆ ಕಾರ್ಯ ಆಗದೇ ತಾಲ್ಲೂಕಿನಲ್ಲಿ ಸುಮಾರು ನಾಲ್ಗೈದು ಸಾವಿರ ಅತಿಕ್ರಮಣದಾರರು ತೊಂದರೆಗೆ ಸಿಲುಕಿದ್ದಾರೆ. ಅರಣ್ಯ ಅತಿಕ್ರಮಣದಾರರಿಗೆ ಜಿಪಿಎಸ್ ಕಾರ್ಯ ಆದರೆ ಆತಂಕ ಕಡಿಮೆ ಆಗಲಿದೆ. ಹೀಗಾಗಿ ಜಿಪಿಎಸ್ ಕಾರ್ಯ ಮಾಡಿಸಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸಬೇಕು ಎಂದು ಆಗ್ರಹಿಸಲಾಗಿದೆ. ಅತಿಕ್ರಮಣದಾರರು ತಮ್ಮ ತಾತ ಮುತ್ತಾತನ ಕಾಲದಿಂದಲೂ ಅರಣ್ಯಭೂಮಿಯಲ್ಲಿ ವಾಸ್ತವ್ಯದ ಮನೆ, ಬಾವಿ, ತೋಟ ನಿರ್ಮಿಸಿಕೊಂಡು ವಾಸ್ತವ್ಯ ಮಾಡಿ ಬಂದಿರುತ್ತಾರೆ.ಇವರಿಗೆ ಅತಿಕ್ರಮಣ ಜಾಗದ ಪಟ್ಟಾ ಕೊಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಅತಿಕ್ರಮಣದಾರರ ಹೋರಾಟಗಾರರ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ಸದಸ್ಯರಾದ ಮೊಹ್ಮದ್ ರಿಜ್ವಾನ್,ಅಬ್ದುಲ್ ಖಯ್ಯೂಂ ಮುಂತಾದವರಿದ್ದರು.

ಭಟ್ಕಳದ ಅರಣ್ಯಭೂಮಿ ಅತಿಕ್ರಮಣದಾರರ ಹೋರಾಟಗಾರರ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಮತ್ತು ಸದ್ಯರು ಜಿಪಿಎಸ್ ಸರ್ವೆ ಕಾರ್ಯ ಮಾಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ಮನವಿ ಸಲ್ಲಿಸಿದರು.