ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವಿದ್ಯಾರ್ಥಿಗಳು ಜ್ಞಾನ ಸಂಪಾದಿಸುವ ಜೊತೆಗೆ ಜೀವನದಲ್ಲಿ ಯಶಸ್ಸು ಗಳಿಸುವಂತಾಗಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಬಿ.ಹೊಸಮನಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ಸಾಂಸ್ಕ್ರತಿಕ ಕ್ರೀಡೆ, ಎನ್‌ಎಸ್‌ಎಸ್ ಹಾಗೂ ವಿವಿಧ ಘಟಕಗಳ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ನಿರಂತರವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪದವಿ ಮುಗಿದ ನಂತರ ಕೆಲವರು ಉದ್ಯೋಗದತ್ತ ಮುಖ ಮಾಡಿದರೆ ಮತ್ತೆ ಕೆಲವರು ಉನ್ನತ ಶಿಕ್ಷಣಕ್ಕೆ ಹೋಗುತ್ತಾರೆ. ಉನ್ನತ ಶಿಕ್ಷಣದಿಂದ ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬಹುದು ಎಂದರು.
ಪಿಐ ಗುರುಶಾಂತ ದಾಶ್ಯಾಳ ಮಾತನಾಡಿ, ಸಾಧನೆಗೆ ಹಠ ಮುಖ್ಯ. ವಿದ್ಯಾರ್ಥಿಗಳ ಗುರಿ ತಮ್ಮ ಜೀವನದ ಮೊದಲ ಪುಟದಲ್ಲಿರುವಂತೆ ನೋಡಿಕೊಳ್ಳಬೇಕು. ಈ ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಖಂಡಿತ ಗುರಿ ಮುಟ್ಟಲು ಸಾಧ್ಯ. ಇದರಿಂದ ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬಹುದು ಎಂದರು. ಇಂದು ಅಪರಾಧ ಮುಕ್ತ ಯುವ ಸಮಾಜ ಅಗತ್ಯವಾಗಿದೆ. ಯುವಜನಾಂಗ ಸಾಮಾಜಿಕ ಮಾಧ್ಯಮಗಳ ಮೋಸಕ್ಕೆ ಒಳಗಾಗಬಾರದು. ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳಿಂದ ತುಂಬಾ ಜಾಗೃತೆಯಿಂದ ಇರಬೇಕು. ಯುವ ಜನಾಂಗ ಯಾವುದೇ ದುಶ್ಚಟಗಳಿಗೆ ಒಳಗಾಗಬಾರದು. ಉತ್ತಮ ಜೀವನ ಸಾಗಿಸುವಂತಾಗಬೇಕೆಂದರು.ಸನ್ಮಾನ ಸ್ವೀಕರಿಸಿದ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ನೈತಿಕತೆ ಬೆಳೆಸಿಕೊಂಡು ಸಾಮರಸ್ಯದಿಂದ ಬಾಳಬೇಕು. ಶಿಕ್ಷಕ, ಸೈನಿಕ, ಕೃಷಿಕ ದೇಶದ ಆಸ್ತಿಯಾದಂತೆ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗುವಂತಾಗಬೇಕೆಂದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿ ರೇಣುಕಾ ಅಂಬಲಿ, ರಾಜ್ಯಶಾಸ್ತ್ರ ವಿಭಾಗದ ಡಾ.ಎಚ್.ಎಂ.ನಾಟೀಕಾರ, ಐಕ್ಯೂಎಸಿ ಸಂಚಾಲಕ ಡಾ.ಅಮಿತ ಮಿರ್ಜಿ, ವಿಜಯಲಕ್ಷ್ಮೀ, ಡಾ.ಪ್ರಶಾಂತ ನಾಯಕ ಟಿ.ಆರ್., ಮಮತಾ ಎಂ., ಲೀಲಾವತಿ ಸಿ., ಪ್ರಿಯಾಂಕ ಜಿಂದೆ, ಲಕ್ಷ್ಮಣಗೌಡ ಪಾಟೀಲ, ಸುರೇಖಾ ದುಲಾರಿ, ಮಲ್ಲು ತಳೇವಾಡ ಇತರರು ಇದ್ದರು.
ಸಹಾಯಕ ಪ್ರಾಧ್ಯಾಪಕ ಶ್ರೀಶೈಲ ಬಳವಾಟ ಪ್ರಾಸ್ತವಿಕವಾಗಿ ಮಾತನಾಡಿ, ವರದಿ ವಾಚಿಸಿದರು. ಕನ್ನಡ ವಿಭಾಗದ ಡಾ.ಬಸಿರಾಬಾನು ನಿಡಗುಂದಿ ಅತಿಥಿಗಳನ್ನು ಪರಿಚಯಿಸಿದರು. ಬಸವರಾಜ ಮಾರೆಮ್ಮಗೋಳ ಸ್ವಾಗತಿಸಿದರು. ಡಾ.ಭೀಮಶಿ ಹಡಪದ ನಿರೂಪಿಸಿದರು. ಇಸ್ಮಾಯಿಲ್ ಶಫಿವುಲ್ಲ ವಂದಿಸಿದರು. ಇದೇ ಸಂದರ್ಭದಲ್ಲಿ ಸಾಂಸ್ಕ್ರತಿಕ, ಕ್ರೀಡಾ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ವಿವಿಧ ಘಟಕಗಳಲ್ಲಿ ಉತ್ತಮ ಸಾಧನೆ ಮಾಡಿದ ಬೋಧಕರಿಗೆ, ವಿದ್ಯಾರ್ಥಿಗಳಿಗೆ, ೨೦೨೩-೨೪ ನೇ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.