ಜೋಡೆತ್ತು ನಿರ್ವಹಣೆಗೆ ಪ್ರೋತ್ಸಾಹ ಧನ ಸಿಗಲಿ

| Published : Mar 07 2025, 12:52 AM IST

ಸಾರಾಂಶ

ಜೋಡೆತ್ತು ನಿರ್ವಹಣೆ ಮಾಡಲು ಸಾಧ್ಯವಾಗದೇ ಇರುವುದರಿಂದಾಗಿ ಅವುಗಳು ಕಸಾಯಿಖಾನೆಗೆ ಹೋಗುತ್ತಿವೆ. ಅದಕ್ಕಾಗಿ ಜೋಡೆತ್ತುಗಳು ನಿರ್ವಹಣೆಗೆ ಪ್ರೋತ್ಸಾಹ ಧನ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕೃಷಿಗೆ ಎಲ್ಲರ ಬೆಂಬಲ ಅಗತ್ಯವಾಗಿದೆ. ಎಲ್ಲ ಜೀವ ಸಂಕುಲ ಉಳಿಯಬೇಕಾದರೆ ರೈತ ಉಳಿಯಬೇಕು. ರೈತ ಉಳಿಯಬೇಕಾದರೆ ಜೋಡೆತ್ತು ಉಳಿಯುವ ಅಗತ್ಯವಿದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಉದ್ಯಾನವನದಲ್ಲಿ ಕೃಷಿ ತಜ್ಞ ಬಸವರಾಜ ಬಿರಾದಾರ ನೇತೃತ್ವದಲ್ಲಿ ಕಳೆದ 9 ದಿನಗಳಿಂದ ನಡೆಯುತ್ತಿರುವ ಜೋಡೆತ್ತಿನ ಕೃಷಿಕರ ನಂದಿ ಸತ್ಯಾಗ್ರಹಕ್ಕೆ ಗುರುವಾರ ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ, ನಿವೃತ್ತ ಯೋಧರು ಸೇರಿದಂತೆ ಇತರರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು, ಜೋಡೆತ್ತು ನಿರ್ವಹಣೆ ಮಾಡಲು ಸಾಧ್ಯವಾಗದೇ ಇರುವುದರಿಂದಾಗಿ ಅವುಗಳು ಕಸಾಯಿಖಾನೆಗೆ ಹೋಗುತ್ತಿವೆ. ಅದಕ್ಕಾಗಿ ಜೋಡೆತ್ತುಗಳು ನಿರ್ವಹಣೆಗೆ ಪ್ರೋತ್ಸಾಹ ಧನ ಅಗತ್ಯವಿದೆ. ಸರ್ಕಾರ ಜೋಡೆತ್ತು ಸಂರಕ್ಷಣೆ ಮಾಡಲು ಪ್ರತ್ಯೇಕ ಯೋಜನೆ ಜಾರಿಗೆ ತರುವ ಅಗತ್ಯವಿದೆ ಎಂದರು. ಸರ್ಕಾರ ಪಶುಪಾಲನೆ ಮಾಡಲು ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಜೋಡೆತ್ತು ಸಂರಕ್ಷಣೆ ಮಾಡುವ ಯೋಜನೆ ಹಾಕಿಕೊಂಡಿಲ್ಲ. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಸ್ತಾವನೆ ಸಲ್ಲಿಸುವ ಅಗತ್ಯವಿದೆ. ಈ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದೆ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಹೋರಾಟ ನಿರಂತರವಾಗಿ ನಡೆಯುವಂತಾಗಲೆಂದರು.

ಭಾರತೀಯ ನಾಗರಿಕತೆ ಹುಟ್ಟಿದ್ದು ನದಿ ತೀರದಲ್ಲಿ ಎಂಬುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾನವ ತನ್ನ ಉಪಜೀವನ ಮಾಡಲು ಆರಂಭ ಮಾಡುವ ಸಮಯದಲ್ಲಿ ಹರಿಯುವ ನದಿ ನೀರು, ಭೂಮಿ ಕಂಡ ತಕ್ಷಣವೇ ಭಗವಂತನ ಸ್ವರೂಪವಾಗಿದ್ದ ಜೋಡೆತ್ತು ಬಳಕೆ ಮಾಡಿಕೊಂಡು ತನ್ನ ಜೀವನ ಆರಂಭಿಸಿದನು. ಭಾರತದ ನಾಗರಿಕತೆ ಜೋಡೆತ್ತಿನ ಮೂಲಕ ಆರಂಭವಾಗಿದೆ ಎಂದರೆ ತಪ್ಪಾಗಲಾರದು. ಜೋಡೆತ್ತಿನ ಸಂಸ್ಕ್ರತಿ ೧೨ ಸಾವಿರ ವರ್ಷದ ಇತಿಹಾಸ ಹೊಂದಿದೆ. ಒಕ್ಕುಲುತನ ಪರಂಪರೆಗೆ ಜೋಡೆತ್ತಿನ ಸಂಸ್ಕ್ರತಿ ಮೂಲವಾಗಿದೆ. ದೇಶಕ್ಕೆ ಸಾವಿರ ಸಂಕಷ್ಟ ಬಂದರೂ ನಾವೆಲ್ಲ ಒಂದಾಗುವ ಸಂಸ್ಕ್ರತಿ ಹೊಂದಿದ್ದೇವೆ. ಇದಕ್ಕೆ ಮೂಲ ಕಾರಣ ಕೃಷಿಯಾಗಿದೆ. ನಮ್ಮ ಮೂಲ ಬುನಾದಿ ಕೃಷಿಯಾಗಿದೆ ಎಂದರು.

ತಾಲೂಕಿನ ಇಂಗಳೇಶ್ವರದ ವಚನಶಿಲಾ ಮಂಟಪದ ಚನ್ನಬಸವ ಸ್ವಾಮೀಜಿ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೃಷಿ ತಜ್ಞ ಬಸವರಾಜ ಬಿರಾದಾರ, ಪಂಚಸೇನಾ ಜಿಲ್ಲಾಧ್ಯಕ್ಷ ಸಂತೋಷ ಮುಂಜಾಣಿ, ಬಸವ ಸೇನೆಯ ರಾಷ್ಟ್ರೀಯ ಸಂಚಾಲಕ ಸಾಹೇಬಗೌಡ ಲಚ್ಯಾಣ, ಬಸವರಾಜ ಸಂಗಮ, ಶ್ರೀಕಾಂತ ಕೊಟ್ರಶೆಟ್ಟಿ, ಸಂಜೀವ ಬಿರಾದಾರ, ಶ್ರೀಕಾಂತ ಪಟ್ಟಣಶೆಟ್ಟಿ, ಮಹಾಂತೇಶ ಹೆಬ್ಬಾಳ, ಸಂಗಮೇಶ ಜಾಲಗೇರಿ, ನಿವೃತ್ತ ಯೋಧರ ಸಂಘದ ಸದಸ್ಯರು, ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ರೈತ ಬಾಂಧವರು, ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ರೈತರು ನಂದಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದರು.