21ನೇ ಶತಮಾನದಲ್ಲಿ ವಿಜ್ಞಾನ, ಆಧ್ಯಾತ್ಮದಿಂದ ಪ್ರೇರಣೆಗೊಳ್ಳಿ

| Published : Nov 23 2025, 01:15 AM IST

21ನೇ ಶತಮಾನದಲ್ಲಿ ವಿಜ್ಞಾನ, ಆಧ್ಯಾತ್ಮದಿಂದ ಪ್ರೇರಣೆಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

21 ನೇ ಶತಮಾನ ರಾಜಕೀಯ ಮತ್ತು ಧಾರ್ಮಿಕತೆಯಿಂದ ಗುರುತಿಸಿಕೊಳ್ಳಬಾರದು. ಬದಲಾಗಿ ವಿಜ್ಞಾನ ಮತ್ತು ಆಧ್ಯಾತ್ಮದಿಂದ ಪ್ರೇರಣೆಗೊಳ್ಳಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಜಯರಾಮ್ ರಮೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

21 ನೇ ಶತಮಾನ ರಾಜಕೀಯ ಮತ್ತು ಧಾರ್ಮಿಕತೆಯಿಂದ ಗುರುತಿಸಿಕೊಳ್ಳಬಾರದು. ಬದಲಾಗಿ ವಿಜ್ಞಾನ ಮತ್ತು ಆಧ್ಯಾತ್ಮದಿಂದ ಪ್ರೇರಣೆಗೊಳ್ಳಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಜಯರಾಮ್ ರಮೇಶ್ ತಿಳಿಸಿದರು.

ನಗರದ ಅಗಳಕೋಟೆಯ ಶಿಕ್ಷಣ ಭೀಷ್ಮ ಡಾ. ಎಚ್.ಎಮ್. ಗಂಗಾಧರಯ್ಯ ಸ್ಮಾರಕ ಭವನದ ವಿಶಾಲ ವೇದಿಕೆಯಲ್ಲಿ ಸಾಹೇ ಆಯೋಜಿಸಿದ್ದ 14ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತ ದೇಶವು ಬೇರೆಲ್ಲ ದೇಶಗಳಿಗಿಂತ ತನ್ನ ಧಾರ್ಮಿಕ, ಸಾಂಸ್ಕೃತಿಕ, ಭಾಷೆ, ಸಂವಿಧಾನದಲ್ಲಿ ವೈವಿಧ್ಯತೆಯಿಂದ ಗುರುತಿಸಿಕೊಂಡಿದೆ. ಹಾಗೆ ಆರ್ಥಿಕವಾಗಿ ಬೆಳವಣಿಗೆ ಕಾಣುತ್ತಿದೆ. ಈ ಸಂದರ್ಭದಲ್ಲಿ ವೈವಿಧ್ಯತೆಯಲ್ಲಿ ಬಿರುಕು ಮೂಡದಂತೆ ಯುವಜನತೆ ಎಚ್ಚರ ವಹಿಸಬೇಕು. ವೈವಿಧ್ಯತೆ ಭಾರತೀಯರನ್ನು ವ್ಯಾಖ್ಯಾನಿಸಬೇಕು, ವಿಭಜಿಸಬಾರದು ಎಂದರು.

ಅಸಮಾನತೆ ಎಂಬುದು ನಮ್ಮ ದೇಶದ ಅಭಿವೃದ್ಧಿಗೆ ಬೀಳುತ್ತಿರುವ ದೊಡ್ಡ ಪೆಟ್ಟು. ಶಿಕ್ಷಣ, ಅರೋಗ್ಯ, ಆರ್ಥಿಕ, ಆದಾಯಗಳಂತಹ ಕ್ಷೇತ್ರದಲ್ಲಿ ಪ್ರಮುಖವಾಗಿ ಅಸಮಾನತೆ ಹೆಚ್ಚಾಗಿದೆ. ಭಾರತದಲ್ಲಿ ಬಡತನ ಕಡಿಮೆಯಾಗಿದೆ ಆದರೆ ಅಸಮಾನತೆ ಹೆಚ್ಚಾಗಿದೆ, ಆದ್ದರಿಂದ ಅಸಮಾನತೆಯ ಸಾಮಾಜಿಕ ವ್ಯವಸ್ಥೆ ಬದಲಾಗಬೇಕಿದೆ ಎಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ಸುಸ್ಥಿರಾಭಿವೃದ್ಧಿ ಕಾಪಾಡುವುದು ಬಹಳ ಮುಖ್ಯವಾಗಿದೆ. ಅಂದರೆ ಪ್ರಕೃತಿ ರಕ್ಷತಿ ರಕ್ಷಿತಃ ಅರ್ಥ ಪ್ರಕೃತಿಯನ್ನು ಯಾರು ರಕ್ಷಿಸುತ್ತಾರೋ, ಅವರನ್ನು ಪ್ರಕೃತಿ ರಕ್ಷಿಸುತ್ತದೆ. ಜಪಾನ್, ಯುರೋಪ್ ದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದ್ದು, ಚೀನಾ ಜನಸಂಖ್ಯೆ ಸುಸ್ಥಿರವಾಗಿದೆ. ಈಗಾಗಾಲೇ ಭಾರತ 1.5 ಬಿಲಿಯನ್ ಜನಸಂಖ್ಯೆ ಹೊಂದಿದ್ದು, 2050ರ ವೇಳೆಗೆ 300 ಮಿಲಿಯನ್‌ಗೆ ಏರಲಿದೆ. ಆದ ಕಾರಣ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಪರಿಸರವನ್ನು ಕಾಪಾಡುವುದು ಮತ್ತು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳ ಒಟ್ಟು 1086 ಮಂದಿಗೆ ಪದವಿ ಪ್ರದಾನ ಮಾಡಿದರು..14 ಮಂದಿಗೆ ಪಿಎಚ್.ಡಿ ಪದವಿ, ವೈದ್ಯಕೀಯದಲ್ಲಿ 3, ದಂತ ವೈದ್ಯಕೀಯದಲಿ 2, ಮತ್ತು ಎಂಜಿನಿಯರಿಂಗ್ ನಲ್ಲಿ 8 ಮಂದಿ ಸೇರಿದಂತೆ ಒಟ್ಟು 15 ಮಂದಿಗೆ ಚಿನ್ನದ ಪದಕ ಮತ್ತು ಪದವಿಗಳನ್ನು ಪ್ರದಾನ ಮಾಡಿದರು. ಇದೇ ವೇಳೆ ಇಬ್ಬರಿಗೆ ಫೆಲೋಶಿಪ್ ನೀಡಿದ್ದು ಈ ಬಾರಿ ಘಟಿಕೋತ್ಸವದ ವಿಶೇಷವಾಗಿತ್ತು.

ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಕೆ ಬಿ ಲಿಂಗೇಗೌಡ, ಅವರು ಸಾಹೇ ವಿಶ್ವವಿದ್ಯಾನಿಲಯ ಪ್ರಗತಿನೋಟದ ವರದಿಯನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ ಮತ್ತು ಡಾ.ಜಿ.ಎಸ್.ಆನಂದ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹೇ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವರಾದ ಡಾ. ಅಶೋಕ್ ಮೆಹತಾ , ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಗುರುಶಂಕರ್ ಸಿ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಪ್ರಭಾಕರ್ ಜಿ ಎನ್, ಉಪ ಕುಲಸಚಿವ ಡಾ.ಸುದೀಪ್ ಕುಮಾರ್, ಟಿ.ಬೇಗೂರಿನ , ಡಾ ದಿವಾಕರ್, ಡಾ.ಎಂ.ಎಸ್. ರವಿಪ್ರಕಾಶ, ಡಾ.ವಿವೇಕ್ ವೀರಯ್ಯ, ಡೀನ್‌ಗಳು, ಶೈಕ್ಷಣಿಕ ಮಂಡಳಿಯ ಸಮಿತಿ ಸದ್ಯಸರು, ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

ಪಾವಗಡದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಸ್ಥಾಪಕರಾದ ಶ್ರೀ ಸ್ವಾಮಿ ಜಪಾನಂದಜಿ ಮಹಾರಾಜ್ ಹಾಗೂ ವಿಜ್ಞಾನಿ ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಎಂಜಿನಿಯರಿಂಗ್‌ನ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.