ಸಾರಾಂಶ
ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಗುರುವಾರ ಕೊಪ್ಪಳ ಜಿಲ್ಲಾ ವಸತಿ ಶಾಲೆಗಳ ಇಂಗ್ಲಿಷ್ ಭಾಷಾ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಯಲಬುರ್ಗಾ: ಮಕ್ಕಳ ಬುದ್ಧಿಮಟ್ಟ ಅರಿತು ಅವರ ಮಾನಸಿಕ ಮಟ್ಟಕ್ಕೆ ತಕ್ಕಂತೆ ಪಾಠಬೋಧನೆ ಮಾಡುವವನೇ ನಿಜವಾದ ಶಿಕ್ಷಕ ಎಂದು ಜಿಲ್ಲಾ ಸಮನ್ವಯಧಿಕಾರಿ ಜೆ.ಎಚ್. ಬೇಸ್ತರ್ ಹೇಳಿದರು.
ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಗುರುವಾರ ಕೊಪ್ಪಳ ಜಿಲ್ಲಾ ವಸತಿ ಶಾಲೆಗಳ ಇಂಗ್ಲಿಷ್ ಭಾಷಾ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಮಕ್ಕಳ ಕಲಿಕೆಯ ಆಳವನ್ನು ಅರಿತು, ಹೊಸ ಕೌಶಲ್ಯ ಅಳವಡಿಸಿಕೊಂಡು ಬೋಧನೆ ಮಾಡಿದಾಗ ಮಾತ್ರ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲು ಸಾಧ್ಯ ಎಂದರು.ವಿದ್ಯಾರ್ಥಿಗಳು ತರಗತಿಯಲ್ಲಿ ಶಿಕ್ಷಕರು ಹೇಳಿದ ಎಲ್ಲ ವಿಷಯವಾರು ಹೋಮ್ ವರ್ಗಗಳನ್ನು ಚಾಚೂತಪ್ಪದೇ ಮಾಡಬೇಕು. ಇದರಿಂದ ನಿಮಗೆ ಮುಂದೆ ಪರೀಕ್ಷೆ ಸಮಯದಲ್ಲಿ ಅಭ್ಯಾಸ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಯಾರಿಗೆ ಯಾವ ಪಾಠ ಅರ್ಥವಾಗುವುದಿಲ್ಲ. ಅಂತಹವರು ಶಿಕ್ಷಕರನ್ನು ಕೇಳಿ ಅರ್ಥ ಮಾಡಿಕೊಳ್ಳುವ ರೂಢಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹೊಸಳ್ಳಿ ವಸತಿ ಶಾಲೆಯ ಪ್ರಾಂಶುಪಾಲ ವಿ.ಬಿ. ಹನುಮಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕ ತಮ್ಮ ವಿಷಯಗಳ ಬಗ್ಗೆ ಪಾಠ ಮಾಡುವಾಗ ಮಕ್ಕಳ ಕಡೆ ಗಮನಹರಿಸಿ ಅವರಿಗೆ ಸುಲಭವಾಗಿ ಯಾವ ರೀತಿಯಲ್ಲಿ ಹೇಳಿದರೆ ಬೋಧನೆ ಅರ್ಥವಾಗುತ್ತದೆಯೋ ಆ ರೀತಿಯಲ್ಲಿ ಹೇಳುವ ಪರಿಪಾಠವನ್ನು ನಾವು ರೂಢಿಸಿಕೊಳ್ಳಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಚಿನ್ನನಗೌಡ ಪಾಟೀಲ, ಜಿಲಾನಿಸಾಬ ದೇಸಾಯಿ ಮತ್ತಿತರರು ಇದ್ದರು. ವಿದ್ಯಾರ್ಥಿಗಳಾದ ಅಶ್ವಿನಿ ಪಮ್ಮಾರ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕರಾದ ದ್ಯಾಮಣ್ಣ ರಾಜೂರ ಸ್ವಾಗತಿಸಿದರು. ಮಂಜುಳಾ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು. ಕಳಕೇಶ ಅರಕೇರಿ ವಂದಿಸಿದರು.