ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರ ತನ್ನಿ

| Published : Apr 24 2024, 02:15 AM IST

ಸಾರಾಂಶ

ಮಕ್ಕಳು ಆಡಿ ಕಲಿ, ಮಾಡಿ ತಿಳಿ ತತ್ವ ಆಧರಿಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ

ಲಕ್ಷ್ಮೇಶ್ವರ: ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರ ತರುವುದೇ ಇಂದಿನ ಮಹತ್ವದ ಜವಾಬ್ದಾರಿಯಾಗಿದೆ. ಇಂತಹ ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸದ ಪ್ರಮುಖ ಹಾದಿಯಾಗಿವೆ ಎಂದು ನಿವೃತ್ತ ಮುಖ್ಯೋಪಾಧ್ಯಾಯನಿ ಡಿ.ಎಫ್. ಪಾಟೀಲ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 4 ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬೇಸಿಗೆ ಶಿಬಿರ ಚೈತ್ರದ ಚಿಗುರು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷೀಯ ನುಡಿಗಳನ್ನು ಆಡಿದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 4 ರ ಮುಖ್ಯೋಪಾಧ್ಯಾಯ ಎಚ್.ಬಿ. ಸಣ್ಣಮನಿ, ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕಾಗಿ ಹಲವಾರು ಚಟುವಟಿಕೆಗಳನ್ನೊಳಗೊಂಡ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಶಿಬಿರದಲ್ಲಿ ಮಕ್ಕಳಿಗಾಗಿ ಭೌತಿಕ ಹಾಗೂ ಬೌದ್ಧಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತ ತಾಲೂಕು ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ, ಕಸಾಪ ಲಕ್ಷ್ಮೇಶ್ವರ ತಾಲೂಕು ಘಟಕವು ಪ್ರತಿ ವರ್ಷ ಬೇಸಿಗೆ ಶಿಬಿರ ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ ಮಕ್ಕಳಿಗಾಗಿ ವಿಶೇಷ ಕಾರ್ಯಯೋಜನೆ ರೂಪಿಸಲಾಗಿದೆ. ಮಕ್ಕಳು ಆಡಿ ಕಲಿ, ಮಾಡಿ ತಿಳಿ ತತ್ವ ಆಧರಿಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಸಂಗಮೇಶ ಅಂಗಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ, ನ್ಯಾಯವಾದಿ ಪ್ರಕಾಶ ವಾಲಿ ಮಾತನಾಡಿದರು.

ವೇದಿಕೆಯಲ್ಲಿ ಕರಾವಿಪ ಜಿಲ್ಲಾ ಅಧ್ಯಕ್ಷ ರಮೇಶ ರಿತ್ತಿ, ಸಿಆರ್ ಪಿ ಉಮೇಶ ನೇಕಾರ, ಶಿಬಿರದ ನಿರ್ದೇಶಕರಾದ ನಿರ್ಮಲ ಅರಳಿ, ಹಿರಿಯ ಶಿಕ್ಷಕ ಬಿ.ಬಿ. ದನದಮನಿ, ಎಸ್.ಬಿ.ಅಣ್ಣಿಗೇರಿ, ಎಸ್.ಎನ್. ತಾಯಮ್ಮನವರ, ಬಿ.ಆರ್.ಪಿ ಬಸವರಾಜ ಯರಗುಪ್ಪಿ, ಸಿ.ಆರ್.ಪಿ ಗಿರೀಶ ನೇಕಾರ, ಉಪಸ್ಥಿತರಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಸ್.ಪಾಟೀಲ, ರಾಜೇಶ ಉಮಚಗಿ, ಬಿ.ಟಿ. ಹೆಬ್ಬಾಳ ಹಾಜರಿದ್ದರು.

ಮೊದಲ ದಿನ ಮಕ್ಕಳ ಮನೋವಿಕಾಸದ ಸಂಬಂಧಿತ ಆಟಗಳು ಕ್ರಾಫ್ಟ್ ಮೂಲಕ ವಿವಿಧ ಚಟುವಟಿಕೆಗಳು, ಮಾದರಿ ತಯಾರಿಕೆ, ಕಥೆ ರಚನೆ, ಪ್ರಾಸಂಗಿಕ ಹಾಡುಗಳು ವಿದ್ಯಾರ್ಥಿಗಳ ಮನಸೂರೆಗೊಂಡವು. ವಿವಿಧ ಶಾಲೆಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು.

ಶ್ರೀನಿಧಿ ಶಂಕ್ರಪ್ಪ ಶಿಳ್ಳಿನ ಪ್ರಾರ್ಥಿಸಿದಳು. ಶಿಬಿರದ ನಿರ್ದೇಶಕ ಈರಣ್ಣ ಗಾಣಿಗೇರ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ವಂದಿಸಿದರು.