ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ದೇಶಕ್ಕೆ ಯಶಸ್ವಿಯನ್ನು ತಂದು ಕೊಡಿ ಎಂದು ಉಪನಿರ್ದೇಶಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ದೇಶಕ್ಕೆ ಯಶಸ್ವಿಯನ್ನು ತಂದು ಕೊಡಿ ಎಂದು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಎಲ್.ಚಿದಾನಂದ ಕುಮಾರ್ ಅವರು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ಬಾಲಕರ ಮತ್ತು ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯಶಸ್ವಿಯಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಆಶಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಚಿತ್ರಾ ವೈ. ಅವರು ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ಪ್ರಾಂಶುಪಾಲರು ಹಾಗೂ ಕೊ.ಜಿ.ಪ.ಪೂ.ಕಾ ಪ್ರಾಂಶುಪಾಲರು ಸಂಘದ ಖಜಾಂಜಿ ವಿವಿಯನ್ ಅಂತೋಣಿ ಆಲ್ವಾರಿಸ್ ಅವರು ಮಾತನಾಡಿ, ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಿ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕೊ.ಜಿ.ಪ.ಪೂ.ಕಾ ಪ್ರಾಂಶುಪಾಲರಳ ಸಂಘದ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರು ಎನ್.ಕೆ.ಜ್ಯೋತಿ ಅವರು ಮಾತನಾಡಿ ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸುವುದು ತಂದೆ ತಾಯಿಗಳ ಕರ್ತವ್ಯ ಹಾಗೂ ಗೌರವ ಆತ್ಮವಿಶ್ವಾಸ ಬೆಳೆಸುವುದು ಮಕ್ಕಳ ಕರ್ತವ್ಯ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗಳನ್ನು ರೂಪಿಸುವುದು ಮತ್ತು ಜವಾಬ್ದಾರಿಯಿಂದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ವಸಂತ್ ಅವರು ಮಾತನಾಡಿ ಕ್ರೀಡೆ ಇದ್ದರೆ ಶಿಕ್ಷಣ ಇರುವುದು ಹಾಗೂ ಕೊಡಗು ಜಿಲ್ಲೆಯು ಉತ್ತಮವಾದ ಸೌಲಭ್ಯಗಳನ್ನು ಹೊಂದಿದೆ ಎಂದರು.

ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ಬಾಲಕರ ಮತ್ತು ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕೊ.ಜಿ.ಪ.ಪೂ.ಕಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಕೆ.ಸಿ.ಚಂದ್ರಶೇಖರ್, ಶಿವಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪಿ.ಆರ್.ವಿಜಯ, ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಉಪನ್ಯಾಸಕರು ಇತರರು ಇದ್ದರು.