ಸಾರಾಂಶ
ಪೋಷಕರ ಆಂಗ್ಲಭಾಷಾ ಶಿಕ್ಷಣದ ವ್ಯಾಮೋಹದಿಂದ ಪ್ರಸ್ತುತ ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಹಂತ ತಲುಪಿವೆ. ಆದರೆ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಇಂದು ಉನ್ನತ ಹುದ್ದೆ, ಸ್ಥಾನಮಾನ ಗಳಿಸಿದ್ದಾರೆ.
ಹುಬ್ಬಳ್ಳಿ:
ಪೋಷಕರಲ್ಲಿ ಆಂಗ್ಲಭಾಷಾ ಶಿಕ್ಷಣದ ವ್ಯಾಮೋಹ ಹೆಚ್ಚಾಗಿದೆ. ಮೊದಲು ಈ ಮನಸ್ಥಿತಿಯಿಂದ ಪೋಷಕರು ಹೊರಬಂದು ಕನ್ನಡ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಇಲ್ಲಿನ ವಿದ್ಯಾನಗರದ ವಿಶ್ವ ಭಾರತಿ ಬಾಲಕಿಯರ ಪ್ರೌಢಶಾಲೆ, ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪೋಷಕರ ಆಂಗ್ಲಭಾಷಾ ಶಿಕ್ಷಣದ ವ್ಯಾಮೋಹದಿಂದ ಪ್ರಸ್ತುತ ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಹಂತ ತಲುಪಿವೆ. ಆದರೆ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಇಂದು ಉನ್ನತ ಹುದ್ದೆ, ಸ್ಥಾನಮಾನ ಗಳಿಸಿದ್ದಾರೆ. ಪೋಷಕರ ವಿಚಾರದ ದೃಷ್ಟಿಕೋನ ಬದಲಾಗಬೇಕಿದೆ. ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲಿಸಬೇಕು. ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹೆಣ್ಣು ಮನಸ್ಸು ಮಾಡಿದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ವಿವಿಧ ಅತ್ಯನ್ನುತ ಸ್ಥಾನಗಳಲ್ಲಿರುವ ಶಾಲೆಯ 19 ಹಳೇ ವಿದ್ಯಾರ್ಥಿನಿಯರೇ ಸಾಕ್ಷಿ ಎಂದರು.ವಿದ್ಯಾರ್ಥಿಗಳಲ್ಲಿ ಛಲ, ಸತತ ಪರಿಶ್ರಮ ಮುಖ್ಯ. ಸಾಧಕರನ್ನು ಸ್ಫೂರ್ತಿಯಾಗಿ ಪಡೆದು ಚೆನ್ನಾಗಿ ಓದಿ ತಾವೂ ಸಾಧನೆ ಮಾಡಬೇಕು. ಪ್ರತ್ಯೇಕವಾಗಿ ಹೆಣ್ಣು ಮಕ್ಕಳ ಶಾಲೆ ಇದ್ದರೆ ವಿದ್ಯಾರ್ಥಿನಿಯರು ಮುಕ್ತವಾಗಿ ಕಲಿಯಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕೆ.ಎಚ್. ಪಾಟೀಲ ಅವರು ಈ ಶಾಲೆ ಆರಂಭಿಸಿ ಈ ಭಾಗದ ಜನರಿಗೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಈ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಶಾಲೆ ಇರಲಿಲ್ಲ. ಆಗ ಕೆ.ಎಚ್. ಪಾಟೀಲ ಅವರು ಹಲವಾರು ದಾನಿಗಳ ಸಹಕಾರ ಪಡೆದು ಈ ಶಾಲೆ ಆರಂಭಿಸಿದರು. ಈಗ ಶಾಲೆಯು ಕಾಲೇಜು ಹಂತದ ವರೆಗೆ ಬೆಳೆದು ನಿಂತಿದೆ. ವಿಚಾರಗಳ ವಿನಿಮಯದಿಂದ ಸಂಸ್ಥೆಗಳು ಬೆಳೆಯುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಕೆಲಸಗಳಲ್ಲಿ ಸಂಸ್ಥೆ ತೊಡಗಿಕೊಳ್ಳಬೇಕು ಎಂದು ಹೇಳಿದರು.ಇದೇ ವೇಳೆ ಶಾಲೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ವಕೀಲ ಕೆ.ಎಲ್. ಪಾಟೀಲ ಹಾಗೂ ವಿವಿಧ ಉನ್ನತ ಹುದ್ದೆಗಳಲ್ಲಿರುವ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಾಸಕ ಎನ್.ಎಚ್. ಕೋನರಡ್ಡಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಹು-ಡಾ ಅಧ್ಯಕ್ಷ ಶಾಕೀರ ಸನದಿ, ಮಾಜಿ ಸಂಸದ ಐ.ಜಿ. ಸನದಿ, ಕಾಂಗ್ರೆಸ್ ಮುಖಂಡ ಎಫ್.ಎಚ್. ಜಕ್ಕಪ್ಪನವರ, ಸಾಹಿತಿ ಅನಿಲ ವೈದ್ಯ, ಗೋವಿಂದ ಮನ್ನೂರ, ಶಾಲೆಯ ಹಳೇ ವಿದ್ಯಾರ್ಥಿನಿ, ಐಎಎಸ್ ಅಧಿಕಾರಿ ವಿದ್ಯಾ ಪಾಟೀಲ, ಪ್ರಾಚಾರ್ಯ ಗೋಪಾಲ ಬಿ.ಜಿ, ಕಾರ್ಯಾಧ್ಯಕ್ಷ ವಿ.ಆರ್. ಕಿರೇಸೂರ ಸೇರಿದಂತೆ ಹಲವರಿದ್ದರು.