ಆಂಗ್ಲರ ದಾಸ್ಯದಿಂದ ಹೊರಬನ್ನಿ: ರಾಘವೇಶ್ವರ ಶ್ರೀ

| Published : Sep 07 2025, 01:01 AM IST

ಆಂಗ್ಲರ ದಾಸ್ಯದಿಂದ ಹೊರಬನ್ನಿ: ರಾಘವೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷರ ಆಳ್ವಿಕೆ ಮುಗಿದು ಮೂರು ತಲೆಮಾರು ಕಳೆದರೂ ನಾವು ಅವರ ದಾಸ್ಯದಿಂದ ಹೊರಬಂದಿಲ್ಲ.

ಗೋಕರ್ಣ: ಬ್ರಿಟಿಷರ ಆಳ್ವಿಕೆ ಮುಗಿದು ಮೂರು ತಲೆಮಾರು ಕಳೆದರೂ ನಾವು ಅವರ ದಾಸ್ಯದಿಂದ ಹೊರಬಂದಿಲ್ಲ. ಇಂಗ್ಲಿಷ್ ಮರೆಯುವ ಬದಲು ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ರಾಘವೇಶ್ವರ ಭಾರತೀ ಶ್ರೀ ವಿಷಾದಿಸಿದರು.ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ೫೯ನೇ ದಿನವಾದ ಶನಿವಾರ ಮುಂಬೈ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಬರಬರುತ್ತಾ ಇಂಗ್ಲಿಷ್ ಭಾಷೆ ಸಂಸ್ಕೃತಿ ಮರೆಯಾಗಬೇಕಿತ್ತು. ಆದರೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ನಮ್ಮ ಆಹಾರ, ವಿಹಾರ, ಶಿಕ್ಷಣ ಪದ್ಧತಿ, ನ್ಯಾಯಾಂಗ ಎಲ್ಲವೂ ಅವರ ಎಂಜಲು. ಈ ದಾಸ್ಯದ ಸಂಕೋಲೆಯಿಂದ ಹೊರಬರಬೇಕು ಎಂದು ಕರೆ ನೀಡಿದರು.

ದಿನಕ್ಕೊಂದು ಇಂಗ್ಲಿಷ್ ಪದ ತ್ಯಜಿಸುವ ಅಭಿಯಾನದಲ್ಲಿ ರಿಮೋಟ್ ಕಂಟ್ರೋಲ್ ಪದ ಬಿಡುವಂತೆ ಸಲಹೆ ಮಾಡಿದರು. ಇದಕ್ಕೆ ದೂರ ನಿಯಂತ್ರಕ ಪದವನ್ನು ಕನ್ನಡದಲ್ಲಿ ಬಳಸಬಹುದು ಎಂದು ಅಭಿಪ್ರಾಯಪಟ್ಟರು.ನಮ್ಮ ಅಗ್ರ ಪರಂಪರೆಯನ್ನು ನಮ್ಮ ಹೃದಯಲ್ಲಿಟ್ಟುಕೊಂಡು ರಕ್ಷಿಸಬೇಕು. ಗುರುಪೀಠದ ಬಗ್ಗೆ ಭಕ್ತಿ ಶ್ರದ್ಧೆ ಇಟ್ಟುಕೊಂಡು ಸೇವೆ ಮಾಡಿ ಬದುಕು ಸಾರ್ಥಕಪಡಿಸಿಕೊಳ್ಳಿ ಎಂದರು.

ಪ್ರತಿಯೊಬ್ಬನ ಹೃದಯದಲ್ಲಿ ಒಂದು ಆಕಾಶವಿದೆ. ಅಲ್ಲಿ ಹೊರಹೊಮ್ಮುವ ಸೂರ್ಯ ಪ್ರಭು ಶ್ರೀರಾಮಚಂದ್ರ. ಅಲ್ಲಿಂದ ಸೂಸುವ ಬೆಳಕು ನಮ್ಮ ಬಾಳ ಕತ್ತಲನ್ನು ಕಳೆಯಲಿ ಎಂದು ಆಶಿಸಿದರು. ಇಂದು ಚಾತುರ್ಮಾಸ್ಯ ವ್ರತದ ಕೊನೆಯ ದಿನ. ಇಂದು ಮುಂಬೈ, ಚೆನ್ನೈ, ಹೈದರಾಬಾದನಂಥ ದೂರದ ಊರುಗಳಿಂದ ಬಂದು ಸೇವೆ ಮಾಡಿದ್ದಾರೆ. ಹೊರ ರಾಜ್ಯಗಳಲ್ಲಿರುವವರಿಗೆ ನಮ್ಮ ಭಾಷೆ- ಸಂಸ್ಕೃತಿ ಉಳಿಸಿಕೊಳ್ಳುವುದು ಸವಾಲಿನ ಕೆಲಸ ಎಂದು ಹೇಳಿದರು.

ಭೌತಿಕವಾಗಿ ದೂರವಿದ್ದರೂ, ಇಲ್ಲಿನ ಶಿಷ್ಯರು ಪೀಠಕ್ಕೆ, ಮಠಕ್ಕೆ ಹತ್ತಿರದವರು. ಮನಸ್ಸು ದೂರ ಇಲ್ಲದಿದ್ದರೆ, ಪ್ರಾದೇಶಿಕ ಅಂತರ ದೊಡ್ಡದಾಗುವುದಿಲ್ಲ. ಭಾವದಲ್ಲಿ ಹತ್ತಿರ ಇರುವುದು ಮುಖ್ಯ. ಎಲ್ಲೇ ಇದ್ದರೂ ನಮ್ಮತನ ಉಳಿಸಿಕೊಳ್ಳಿ. ನಮ್ಮ ರೀತಿ ರಿವಾಜುಗಳನ್ನು ಉಳಿಸಿಕೊಳ್ಳಿ ಎಂದು ಸಲಹೆ ಮಾಡಿದರು.

ದೇವರು ಮತ್ತು ಮಾನವನ ನಡುವಿನ ಅಂತರವನ್ನು ಕಡಿಮೆ ಮಾಡುವುದು ಸ್ಮರಣೆ ಅಥವಾ ಸ್ಮೃತಿ ಎಂದು ವಿಶ್ಲೇಷಿಸಿದರು.

ಉಳ್ಳಾಲ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ಬೊಳಿಯಾರು ಶ್ರೀಗಳ ದರ್ಶನಾಶೀರ್ವಾದ ಪಡೆದರು.

ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಶ್ರೀಮಠದ ಶಾಸ್ತ್ರಿಗಳಾದ ಸುಚೇತನ ಘನಪಾಠಿಗಳು, ಕಾರ್ಯದರ್ಶಿ ಮಧು ಜಿ.ಕ, ಜಿ.ಕೆ.ಮಧ್ಯಸ್ಥ, ಆಚಾರ ವಿಚಾರ ಗಜಾನನ ಭಟ್ಟ ಇದ್ದರು.