ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬಂದರಷ್ಟೇ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು.
ತಾಲೂಕಿನ ವೆಂಕಟಯ್ಯನಛತ್ರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.ಜ್ಞಾನಾರ್ಜನೆಗೆ ನಗರ ಪ್ರದೇಶದ ಶಾಲೆಗಳೇ ಬೇಕು ಎಂಬ ಕಲ್ಪನೆ ತಪ್ಪು. ಕಲಿಯುವ ಆಸಕ್ತಿ ಇದ್ದರೆ ಯಾವ ಶಾಲೆಯಲ್ಲಾದರೂ ಓದಬಹುದು. ಈ ಶಾಲೆಯಲ್ಲಿನ ವಿದ್ಯಾರ್ಥಿಗಳ ಕಲಿಕಾಸಕ್ತಿ ಸಂತಸ ಮೂಡಿಸಿದೆ. ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮಗ್ನರಾಗಬೇಕು. ಸಂವಿಧಾನ ಜಾಗೃತಿ ಜಾಥಾ ಬಂದಾಗ ಸಂವಿಧಾನದ ಪೀಠಿಕೆ ಓದಬೇಕು. ಅದನ್ನು ಬಾಯಿ ಪಾಠ ಮಾಡಿಕೊಂಡು ಎಲ್ಲಾ ಮಕ್ಕಳು ಓದುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಎಂದರು.
ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ಪ್ರಶ್ನೆ ಪತ್ರಿಕೆ ಎಷ್ಟೇ ಕಠಿಣವಾಗಿದ್ದರೂ ಧೈರ್ಯದಿಂದ ಬರೆಯುತ್ತೇನೆ ಎಂಬ ವಿಶ್ವಾಸ ನಮ್ಮಲ್ಲಿ ಮೂಡಬೇಕು. ಯಾರದೋ ಒತ್ತಡಕ್ಕೆ ವ್ಯಾಸಂಗ ಮಾಡಬಾರದು. ಪಠ್ಯ ಪುಸ್ತಕ ಅಧ್ಯಯನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸಬೇಕು. ಕಲಿಕೆಗೆ ನೆರವಾಗಲಿ ಎಂಬ ಉದ್ದೇಶದಿಂದ ಡಿಜಿಟಲ್ ಕಲಿಕೆಗೆ ಅನೇಕ ಸವಲತ್ತು ಕಲ್ಪಿಸಲಾಗುತ್ತಿದ್ದು, ಅದರ ಸದುಪಯೋಗ ಪಡೆಯಬೇಕು ಎಂದರು.ಹುಬ್ಬೇರುವಂತೆ ಮಾಡಿದ ಮಕ್ಕಳು:ತಾಲೂಕಿನ ವೆಂಕಟಯ್ಯನಛತ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗಾಲಯ ಉದ್ಘಾಟನಾ ಸಮಾರಂಭ ಎಲ್ಲರ ಹುಬ್ಬೇರುವಂತೆ ಮಾಡಿತು. 50 ಮಕ್ಕಳು ವಿಶೇಷವಾಗಿ ಮೆಹಂದಿಯಲ್ಲಿ ವಿಜ್ಞಾನ ಚಿತ್ರಗಳನ್ನು ಬಿಡಿಸಿದರೆ ೧೦೦ಕ್ಕು ಹೆಚ್ಚು ವಿದ್ಯಾರ್ಥಿಗಳು ರಂಗೋಲಿ ಮೂಲಕ ವಿಜ್ಞಾನ ಚಿತ್ರಗಳನ್ನು ಬಿಡಿಸಿದರು. 20 ಮಕ್ಕಳು ವಿವಿಧ ಪ್ರಯೋಗಗಳನ್ನು ಮಾಡಿದರು. ಮಕ್ಕಳ ವಿಜ್ಞಾನಾಸಕ್ತಿ ಕಂಡು ಶಿಕ್ಷಣ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಉಪಪ್ರಾಂಶುಪಾಲರಾದ ನಾಗರತ್ನ.ಎಸ್, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ರಾಜ್, ಸಹ ಕಾರ್ಯದರ್ಶಿ ಮಲ್ಲೇಶ್, ಶಿಕ್ಷಕರಾದ ವೆಂಕಟಾಚಲ, ಸುಧಾಕರ್, ಶೈಲಜಾ, ದೈಹಿಕ ಶಿಕ್ಷಕ ನಟರಾಜ್ ಹಾಜರಿದ್ದರು.