ಕಾಲಮಿತಿಯೊಳಗೆ ಜನರ ಕೆಲಸ ಮಾಡಿಕೊಡಿ

| Published : Nov 14 2025, 01:15 AM IST

ಸಾರಾಂಶ

ಜನಸಂಪರ್ಕ ಸಭೆಯಲ್ಲಿ ಬಂದ ಅರ್ಜಿಗಳನ್ನು ಹದಿನೈದು ದಿನಗಳಲ್ಲಿ ವಿಲೇವಾರಿ ಮಾಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಗರ: ಜನಸಂಪರ್ಕ ಸಭೆಯಲ್ಲಿ ಬಂದ ಅರ್ಜಿಗಳನ್ನು ಹದಿನೈದು ದಿನಗಳಲ್ಲಿ ವಿಲೇವಾರಿ ಮಾಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಕಲ್ಮನೆಯಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಫಲಾನುಭವಿಗಳು ಸೌಲಭ್ಯಕ್ಕಾಗಿ ಬಂದಾಗ ಕಾರಣವಿಲ್ಲದೆ ಸತಾಯಿಸಬೇಡಿ. ಅವರನ್ನು ಸುಮ್ಮನೆ ಅಲೆಸಿದರೆ ಅವರ ಒಂದು ದಿನದ ಕೂಲಿಹಣವನ್ನು ಅಧಿಕಾರಿಗಳೇ ಕೊಡಬೇಕು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಒಟ್ಟು ೧೨೩೫ ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗಿದೆ. ಖಾತೆ ಬದಲಾವಣೆ, ಪೌತಿ ಖಾತೆ, ೯೪ ಸಿ ಸೇರಿ ಭೂಮಿಗೆ ಸಂಬಂಧಪಟ್ಟ ಅರ್ಜಿಗಳು ಹೆಚ್ಚು ಬಂದಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಜನರಿಗೆ ಹಕ್ಕುಪತ್ರ ನೀಡಲು ಗಮನ ಹರಿಸುತ್ತದೆ ಎಂದರು.ಕಲ್ಮನೆ ಗ್ರಾಮ ಪಂಚಾಯ್ತಿ ನಂತರ ಅತಿಬಡವರು, ಕೂಲಿ ಕಾರ್ಮಿಕರು ಹೆಚ್ಚು ಇರುವ ಗ್ರಾಮ ಪಂಚಾಯ್ತಿಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಜನರಿಂದ ಅಹವಾಲು ಪಡೆದು ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಕಳೆದ ಮಳೆಗಾಲ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ಹಣ ಮಂಜೂರು ಮಾಡಿ. ಕಳೆದ ಆರೇಳು ವರ್ಷಗಳಿಂದ ಖಾತೆ ಬದಲಾವಣೆಗಾಗಿ ಕಚೇರಿಗೆ ಅಲೆಯುತ್ತಿದ್ದಾರೆ. ಕಾಲಮಿತಿಯೊಳಗೆ ಅವರ ಕೆಲಸ ಮಾಡಿಕೊಡಿ. ಸಾಮಾನ್ಯ ವರ್ಗದವರು ಮನೆ ಕಟ್ಟಿಕೊಡಿ ಎಂದು ಅರ್ಜಿ ಸಲ್ಲಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ವರ್ಗದವರು ಇದರ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಅಧಿಕಾರಿಗಳು ಅವರಿಗೆ ಸರ್ಕಾರಿ ಸೌಲಭ್ಯ ಪಡೆಯಲು ಉತ್ತೇಜನ ನೀಡಬೇಕು ಎಂದು ಹೇಳಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ರಶ್ಮಿ.ಜೆ.ಎಚ್, ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಕಲ್ಮನೆ ಗ್ರಾಪಂ ಅಧ್ಯಕ್ಷ ಅಮರನಾಥ್, ಪ್ರಮುಖರಾದ ಜಯಪ್ರಕಾಶ್, ನಾಗರಾಜ್, ಮಹಾಬಲೇಶ್ವರ, ಸುರೇಶ್ ಗೌಡ, ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ಅನ್ವರ್ ಭಾಷಾ ಇತರರಿದ್ದರು.

ಮಾತ್ರೆಗೆ ಹಣ ಕೊಡುತ್ತೇನೆ ಜನಸಂಪರ್ಕ ಸಭೆಯಲ್ಲಿ ವಿಶೇಷ ಚೇತನ ಮಹಿಳೆಯೊಬ್ಬರು ಮನೆ ಬಿದ್ದು ಹೋಗಿ ವರ್ಷವಾಯಿತು. ಈತನಕ ಪರಿಹಾರ ಬಂದಿಲ್ಲ. ಗೃಹಲಕ್ಷ್ಮಿ ಹಣ ಮನೆ ನಿರ್ವಹಣೆಗೆ ಸಾಕಾಗುತ್ತಿದೆ. ಔಷಧಿ ಮಾತ್ರೆಗೆ ಹಣ ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡಾಗ ಶಾಸಕ ಬೇಳೂರು ಪ್ರತಿ ತಿಂಗಳು ನಿಮ್ಮ ಮಾತ್ರೆಗೆ ಬೇಕಾಗುವಷ್ಟು ಹಣವನ್ನು ನಾನು ಕೊಡುತ್ತೇನೆ ಎಂದು ಭರವಸೆ ನೀಡಿದರು.