ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಕಳೆದ ಮೂರ್ನಾಲ್ಕು ದಶಕದಿಂದೀಚೆಗೆ ಶಿಕ್ಷಣವಂತರು ಸಂಖ್ಯೆ ಹೆಚ್ಚಾಗಿದ್ದು, ಕಷ್ಟಪಟ್ಟಾದರೂ ತಮ್ಮ ಮಕ್ಕಳಿಗೆ ಪದವಿ ಶಿಕ್ಷಣ ಕೊಡಿಸಬೇಕೆನ್ನುವ ಮನಸ್ಥಿತಿ ಬಹುಶಃ ದೇಶದಲ್ಲಿ ವಿದ್ಯಾವಂತರ ಸಂಖ್ಯೆಯನ್ನು ಹೆಚ್ಚಿಸಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬ್ಯಾಡಗಿ ಹಾಗೂ ಧಾರವಾಡದ ಕವಿವಿ ಪ್ರಸಾರಾಂಗ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಭವನದಲ್ಲಿ ಮಂಗಳವಾರ 526ನೇ ವ್ಯಾಸಂಗ ವಿಸ್ತರಣಾ ಉಪನ್ಯಾಸ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣ ವಿಶ್ವವ್ಯಾಪಿ ವಿಸ್ತಾರ ಪಡೆದಿದ್ದು, ಹೊರ ದೇಶಗಳಲ್ಲಿಯೂ ವಿದ್ಯಾರ್ಥಿಗಳು ಗುಣಮಟ್ಟದ ಹಾಗೂ ತಾಂತ್ರಿಕ, ವೈದ್ಯಕೀಯ ಸೇರಿದಂತೆ ಹತ್ತಾರು ಕೋರ್ಸ್‌ಗಳನ್ನು ಪಡೆಯಲು ಅವಕಾಶ ನೀಡಲಾಗಿದ್ದು, ಶಿಕ್ಷಣದ ಹರಿವಿನ ಜೊತೆ ಪಾಲಕರು, ಶಿಕ್ಷಣ ಪಡೆಯುವರು ಮುಖ ಮಾಡಬೇಕಿದೆ ಎಂದು ತಿಳಿಸಿದರು.ಕಳೆದೆರಡು ದಶಕಗಳ ಹಿಂದೆ ಪಟ್ಟಣದಲ್ಲಿ ಶಾಲಾ-ಕಾಲೇಜು ತೆರೆದ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು, ಉನ್ನತ ಸ್ಥಾನದಲ್ಲಿದ್ದಾರೆ. ಬಡವರು, ಹಿಂದುಳಿದವರು ಹೆಚ್ಚಿನ ಶಿಕ್ಷಣ ಪಡೆದಲ್ಲಿ ನಿರೀಕ್ಷಿತ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸುತ್ತಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಲುವಾಗಿ ನರ್ಸರಿಯಿಂದ ಹಿಡಿದು ಪದವಿ ಹಂತದವರೆಗೂ ಕಾಲೇಜು ಆರಂಭಿಸಿದ್ದೇವೆ ಎಂದರು.
ವಿದ್ಯಾರ್ಥಿಗಳ ಕಲಿಕೆ ಸಮಯದಲ್ಲಿ ಶೈಕ್ಷಣಿಕ ಸಾಧನೆ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕಿದೆ. ಶೈಕ್ಷಣಿಕ ವ್ಯವಸ್ಥೆ ಸಾಕಷ್ಟು ಬದಲಾವಣೆಯಾಗಿದ್ದು, ತಾಂತ್ರಿಕತೆ ಹಾಗೂ ಹೊಸ ಶಿಕ್ಷಣ ನೀತಿ ನಿಯಮಗಳನ್ನು ಅರಿತು ವಿದ್ಯಾರ್ಥಿಗಳು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು, ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಶೈಕ್ಷಣಿಕ ಸಮಯವನ್ನು ವ್ಯರ್ಥಮಾಡದೇ, ಗುಣಮಟ್ಟದ ಶಿಕ್ಷಣ ಪಡೆಯುವಂತೆ ತಿಳಿಸಿದರು.ಕವಿವಿ ಪ್ರಸಾರಾಂಗ ವಿಭಾಗದ ನಿರ್ದೇಶಕ ಎನ್. ಸಿದ್ದಪ್ಪ ಮಾತನಾಡಿ, ಕವಿವಿ ಕಾಲೇಜು ಶಿಕ್ಷಣ ವಿಭಾಗದಲ್ಲಿ ತೀವ್ರ ಬದಲಾವಣೆ ತಂದಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ವಿದ್ಯಾರ್ಥಿಗಳು ಪರಿವರ್ತನೆಯಾಗಬೇಕು. ಪೈಪೋಟಿ ಜಗತ್ತಿನ ಓಟದಲ್ಲಿ ನಾವಿದ್ದು, ನಿತ್ಯ ವೇಗ ಪಡೆಯಬೇಕಿದೆ. ಕವಿವಿ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ತರಬೇತಿ ಕೋರ್ಸ್‌ಗಳನ್ನು ಆರಂಭಿಸಿದ್ದು, ಆಯಾ ಕಾಲೇಜುಗಳಲ್ಲಿರುವ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು, ಯಾವುದೇ ವಿಷಯ ಕಲಿಯಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ವಿದ್ಯಾರ್ಥಿಗಳು ನೂತನ ಮಾಹಿತಿ ಪಡೆಯುವುದು ಮುಖ್ಯವಾಗಿದೆ, ಇದಕ್ಕಾಗಿ ಕಾಲೇಜುಗಳಲ್ಲಿ ಆಗಾಗ್ಗೆ ಇಂತಹ ಶಿಬಿರ ಹಾಗೂ ವಿಶೇಷ ತಿಳುವಳಿಕೆ, ಜಾಗೃತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಈ ವೇಳೆ ಕವಿವಿ ಪ್ರಸಾರಾಂಗ ವಿಭಾಗದ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ, ಬಿಇಎಸ್ ಸಂಸ್ಥೆಯ ಉಪಾಧ್ಯಕ್ಷ ಶೇಖರಗೌಡ್ರ ಪಾಟೀಲ, ಎಂ.ಸಿ. ಜೋಶಿ, ಡಾ. ಎಸ್.ಎನ್. ನಿಡಗುಂದಿ, ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ, ಜಗದೀಶ ಹೊಸಮನಿ, ಅಜಯಕುಮಾರ ಯಾದವ, ಡಾ. ಸುರೇಶಕುಮಾರ ಪಾಂಗಿ, ಡಾ. ಎ.ಎಸ್. ರಶ್ಮಿ, ಪ್ರೇಮಾನಂದ ಲಕ್ಕಣ್ಣನವರ, ಉಪನ್ಯಾಸಕ ನಿಂಗರಾಜ ಕುಡಪಲಿ, ಪ್ರಶಾಂತ ಜಂಗಳೇರ, ಎನ್.ಎಸ್. ಪ್ರಶಾಂತ, ಐಶ್ವರ್ಯ ಮುಚ್ಚಟ್ಟಿ, ನಿವೇದಿತ ವಾಲಿಶೆಟ್ಟರ, ಕವಿತಾ ಮಾಸಣಗಿ, ಡಾ. ಪ್ರಭುಲಿಂಗ ದೊಡ್ಮನಿ ಇದ್ದರು.