ಸಮಯಾವಕಾಶ ಕಡಿಮೆ ಇರುವುದರಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ತಾನೇ ಖುದ್ದು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಗುವುದು.

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಡಿ.22ರಿಂದ 28ರವೆರಗೆ ನಡೆಯುವ ಕರಾವಳಿ ಉತ್ಸವ-2025ನ್ನು ವಿಜೃಂಭಣೆಯಿಂದ ಆಚರಿಸಲು ಬೇಕಾದ ಸಕಲ ಸಿದ್ಧತೆ ಕೈಗೊಳ್ಳುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕರಾವಳಿ ಉತ್ಸವದ ಆಮಂತ್ರಣ ಪತ್ರಿಕೆ ಶಿಷ್ಠಾಚಾರದಂತೆ ಅಂತಿಮವಾಗಿದ್ದರೆ, ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡುವಂತೆ ತಿಳಿಸಿದ ಅವರು, ಸಮಯಾವಕಾಶ ಕಡಿಮೆ ಇರುವುದರಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ತಾನೇ ಖುದ್ದು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಗುವುದು ಎಂದರು.

ಶಿಷ್ಠಾಚಾರದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ಆಮಂತ್ರಣ ಪತ್ರಿಕೆ ನೀಡಲು ಕ್ರಮವಹಿಸುವಂತೆ ತಿಳಿಸಿದ ಅವರು, ಯಾವುದೇ ಗೊಂದಲಗಳಿಗೆ ಅವಕಾಶ ಕಲ್ಪಿಸದಂತೆ ಎಲ್ಲಾ ಸಮಿತಿಯ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಮತ್ತು ಅಧಿಕಾರಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದ ಅವರು, ಉತ್ಸವಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ₹1 ಕೋಟಿ ಅನುದಾನ ನೀಡುವುದಾಗಿ ಮಂತ್ರಿಗಳು ತಿಳಿಸಿದ್ದು, ಇದರ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹5 ಕೋಟಿ ಅನುದಾನ ಬಿಡುಗಡೆಯಾಗಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ತಮಗೆ ವಹಿಸಿದ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ಇವೆಂಟ್ ಮ್ಯಾನೇಜಮೆಂಟ್ ಅವರು ಕಾರ್ಯಕ್ರಮದ ಸಂಗೀತ ಪ್ರದರ್ಶನ ನೀಡಲು ಕಲಾವಿದರನ್ನು ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ನೀಡಿದ್ದು, ಅದರಂತೆ ಡಿ.22ರಂದು ಶಂಕರ ಮಹಾದೇವನ್, ಡಿ.23ರಂದು ಮಿಕಾ ಸಿಂಗ್, ಡಿ.24 ರಂದು ಸೋನು ನಿಗಮ್, ಡಿ.25ರಂದು ರಫ್ತಾರ್, ಡಿ.27 ರಂದು ಮಹಮ್ಮದ್ ದಾನೀಶ್, ಡಿ.28ರಂದು ದಲೇರ್ ಮೆಹಂದಿ ತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದು, ಡಿ.26ರ ಕಾರ್ಯಕ್ರಮದ ಕಲಾವಿದರು ಅಂತಿಮವಾಗಬೇಕಿದೆ ಎಂದರು.

ಕರಾವಳಿ ಉತ್ಸವ ಕಾರ್ಯಕ್ರಮ ಆಯೋಜನೆ ಕುರಿತಂತೆ ಅಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ ಹಾಗೂ ಸಮಿತಿ ಸದಸ್ಯರಿಗೆ ಅವರ ಜವಾಬ್ದಾರಿ ಬಗ್ಗೆ ತಿಳಿಸಿಲಾಗಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಪ್ರತಿ ದಿನ ಸಂಜೆ 5.30 ಗಂಟೆಯಿಂದ 7.30ರವರಗೆ ಅವಕಾಶ ನೀಡಲಾಗಿದ್ದು, ಸ್ಥಳೀಯ ಕಲಾವಿದರು ಈಗಲೂ ಅರ್ಜಿ ಸಲ್ಲಿಕೆ ಮಾಡುತ್ತಿರುವದರಿಂದ ಅವರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ವಿವಿಧ ಸ್ಪರ್ಧೆಗಳು ಮತ್ತು ಮನರಂಜನಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಡಿ.22ರಂದು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವ ಗಣ್ಯರಿಗೆ ವೇದಿಕೆಗೆ ಸ್ವಾಗತಿಸಲು ಜಿಲ್ಲಾ ಮತ್ತು ರಾಜ್ಯ ಮಟ್ಟದ 15ರಿಂದ 20 ಕಲಾ ತಂಡಗಳಿoದ ಮೆರವಣಿಗೆ, ಮೀನುಗಾರರ ದೀಪ ಮೆರವಣಿಗೆ, ಡಿ.23ರಂದು ಛಾಯಾಗ್ರಹಣ ಮತ್ತು ರೀಲ್ಸ್ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಆಯ್ಕೆಯಾದ ಛಾಯಾಗ್ರಹಣ ಮತ್ತು ರೀಲ್ಸ್‌ಗಳನ್ನು ಕಾರ್ಯಕ್ರಮದ ಅಂತಿಮ ದಿನದವರೆಗೂ ಪ್ರದರ್ಶನ ಮಾಡಲಾಗುವುದು ಡಿ.24ರಂದು ರಂಗೋಲಿ ಮತ್ತು ಅಡುಗೆ ಸ್ಪರ್ಧೆ, 25ರಂದು ಮ್ಯಾರಥಾನ್ ಮತ್ತು ಕರಾವಳಿ ರನ್ ಸ್ಪರ್ಧೆಯು 3, 5 ಮತ್ತು 10 ಕಿಮೀ ವಿಭಾಗದಲ್ಲಿ ನಡೆಯಲಿದೆ. ಡಿ.26ರಂದು ಹಗ್ಗ ಜಗ್ಗಾಟ, ಮಕ್ಕಳ ಚಿತ್ರಕಲಾ ಸ್ಪರ್ಧೆ, ಗೋಡೆಗಳ ಮೇಲೆ ಚಿತ್ರಕಲಾ ಸ್ಪರ್ಧೆ ಮತ್ತು ಡಿ.27ರಂದು ಶ್ವಾನ ಪ್ರದರ್ಶನ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು.