ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದ್ಯಾರ್ಥಿಗಳು ಸೀಮಿತ ಜ್ಞಾನದ ಬಂಧಿಗಳಾಗದೆ ನಿರಂತರ ಕಲಿಕೆಗೆ ತೆರೆದುಕೊಂಡು ಜಾಗತಿಕ ಮಟ್ಟದ ಸ್ಪರ್ಧೆಗೆ ಅಣಿಯಾಗಿರುವಂತೆ ಪದ್ಮಶ್ರಿ ಪುರಸ್ಕೃತ ವಿಜ್ಞಾನಿ ಡಾ.ಪ್ರಹ್ಲಾದ್ ರಾಮರಾವ್ ಹೇಳಿದರು.ಬುಧವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯ 60ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಅವಕಾಶಗಳು ಮತ್ತು ಸವಾಲುಗಳು ಒಟ್ಟಾಗಿ ಎದುರಾಗುತ್ತವೆ. ಸವಾಲುಗಳನ್ನು ಹೇಗೆ ಮೆಟ್ಟಿಲಾಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ನಾಯಕತ್ವ ಗುಣವನ್ನು ಅಳೆಯಲಾಗುತ್ತದೆ. ಇಂದಿನ ಕಲಿಕೆ ನಾಳೆಯೇ ಹಳತಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಜೀವನ ಪರ್ಯಂತ ಕಲಿಕೆಗೆ ಮುಕ್ತವಾಗಿರಬೇಕು ಎಂದರು.ತಂತ್ರಜ್ಞಾನ, ಉದ್ಯಮ ಕ್ಷೇತ್ರದ ಪೈಪೋಟಿ ಇಂದು ವಿಶ್ವಮಟ್ಟದಲ್ಲಿದೆ. ಬೆಂಗಳೂರು, ಭಾರತದ ಗಡಿಯಾಚೆಗೆ ನಾವು ಸ್ಪರ್ಧಿಸಲು ಸಿದ್ಧರಿರಬೇಕು. ಡಿಜಿಟಲ್ ಕ್ರಾಂತಿ, ಕೃತಕ ಬುದ್ಧಿಮತ್ತೆ ಹೊಸ ಮಾದರಿಯ ಸವಾಲುಗಳನ್ನು ಸುಸ್ಥಿರ ಅಧ್ಯಯನ, ನಾವಿನ್ಯತೆಯ ಮೂಲಕ ಎದುರಿಸಬೇಕಾಗಿದೆ ಎಂದು ತಿಳಿಸಿದರು.
ದೇಶದ ಅಭಿವೃದ್ಧಿಗೆ ಬಳಸಿ: ಗೆಹಲೋತ್ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪಡೆಯುವ ಜ್ಞಾನವನ್ನು ಉತ್ತಮ ಸಮಾಜ ನಿರ್ಮಾಣ ಹಾಗೂ ದೇಶದ ಅಭಿವೃದ್ಧಿಗೆ ಬಳಸುವಂತೆ ಕರೆಕೊಟ್ಟರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಪದವೀದರರು ಮುಂದಿನ ಔದ್ಯೋಗಿಕ ಅಥವಾ ಶಿಕ್ಷಣದ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಸೋಲು ಎದುರಾದರೆ ಧೃತಿಗೆಡದೆ ಗೆಲುವಿಗಾಗಿ ಪ್ರಯತ್ನಶೀಲರಾಗಿ ಎಂದು ಹೇಳಿದರು.11 ಚಿನ್ನದ ಪದಕ: ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಪ್ರೇಮಾ ಎಸ್. 11 ಚಿನ್ನದ ಪದಕ ಪಡೆದರು. ಸ್ನಾತಕ ಪದವಿ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಹೇಮಂತ. ಎಸ್ 7 ಚಿನ್ನದ ಪದಕ, ಎಂಎಸ್‌ಸಿ ಫಿಸಿಕ್ಸ್‌ನಲ್ಲಿ ಸೌಫಿಯಾ ಕೆ.ಎಂ. 7 ಚಿನ್ನದ ಪದಕ, ಎಂಎಸ್‌ಸಿ ಕೆಮೆಸ್ಟ್ರಿಯಲ್ಲಿ ವಿದ್ಯಾಶ್ರೀ ಬಿ.ಎಸ್. 7 ಚಿನ್ನದ ಪದಕ ಪಡೆದರು.
ಒಟ್ಟಾರೆ 30,300 ವಿದ್ಯಾರ್ಥಿಗಳು ಪದವಿ ಪಡೆದರು. 157 ವಿದ್ಯಾರ್ಥಿಗಳು 298 ಚಿನ್ನದ ಪದಕ ಸ್ವೀಕರಿಸಿದರೆ, 61 ವಿದ್ಯಾರ್ಥಿಗಳು 132 ನಗದು ಪ್ರಶಸ್ತಿ ಪಡೆದರು. ಒಟ್ಟು 140 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಸ್ವೀಕರಿಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ., ಕುಲಸಚಿವರು ಕೆ.ಟಿ. ಶಾಂತಲಾ, ಕುಲಸಚಿವರು (ಮೌಲ್ಯಮಾಪನ ) ಪ್ರೊ.ಸಿ.ಎಸ್.ಕರಿಗಾರ್, ಸಿಂಡಿಕೇಟ್ ಸದಸ್ಯ ದಂಡಿಕೆರೆ ನಾಗರಾಜ್ ಉಪಸ್ಥಿತರಿದ್ದರು.
ಬಾಕ್ಸ್...ಡಾ.ಟಿ.ಬಿ. ಪ್ರಸನ್ನ, ಡಿ. ಮಾದೇಗೌಡ ಗೌಡಾ ಪ್ರದಾನಇದೇ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ, ಸಮಾಜ ಸೇವಕರು ಡಿ. ಮಾದೇಗೌಡ, ಜೆ.ಪಿ. ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಬಿ. ಪ್ರಸನ್ನ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೆಟ್ ಪ್ರದಾನ ಮಾಡಿದರು. ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹಾಜರಾಗಿರಲಿಲ್ಲ.------
ಫೋಟೋ1) ಬೆಂಗಳೂರು ವಿಶ್ವವಿದ್ಯಾಲಯ 60ನೇ ಘಟಿಕೋತ್ಸವದಲ್ಲಿ ಡಿ. ಮಾದೇಗೌಡ, ಡಾ.ಟಿ.ಬಿ.ಪ್ರಸನ್ನ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೆಟ್ ಪ್ರದಾನ ಮಾಡಿದರು.
2) ಅತೀ ಹೆಚ್ಚು ಚಿನ್ನದ ಪದಕ ಪಡೆದ ಪ್ರೇಮಾ ಎಸ್., ಹೇಮಂತ್ ಎಸ್., ಸೌಫಿಯಾ ಕೆ.ಎಂ., ವಿದ್ಯಾಶ್ರೀ ಬಿ.ಎಸ್.