ಕನ್ನಡಪ್ರಭ ವಾರ್ತೆ ಹಿರಿಯೂರು
ಮುಂಬರುವ ಹಿರಿಯೂರು ವಿಧಾನಸಭಾ ಉಪ ಚುನಾವಣೆ ಎದುರಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕರೆ ನೀಡಿದರು.ನಗರದ ವೀನಸ್ ಹಾಲ್‌ನಲ್ಲಿ ಶುಕ್ರವಾರ ನಡೆದ ತಾಲೂಕು ಬಿಜೆಪಿ ಮಂಡಲದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸದೃಢವಾಗಿದ್ದು ಕಾರ್ಯಕರ್ತರು ಎರಡು ತಿಂಗಳ ಕಾಲ ಗಟ್ಟಿ ಮನಸ್ಸು ಮಾಡಿ ಕೆಲಸ ಮಾಡಿದರೆ ಗೆಲುವು ನಮ್ಮದಾಗುತ್ತದೆ ಎಂದರು.ದಾವಣಗೆರೆ ವಿಭಾಗದ ಪ್ರಭಾರಿ ಮೇಘರಾಜ್ ಮಾತನಾಡಿ, ಹಿರಿಯೂರು ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸುವುದು ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಬೂತ್ ಮಟ್ಟದಿಂದ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆಗೆ ಆಧ್ಯತೆ ನೀಡುವ ಮೂಲಕ ಸಂಘಟಿತರಾಗಿ ಜನವಿರೋಧಿ ಸರ್ಕಾರದ ಅಭ್ಯರ್ಥಿಯನ್ನು ಸೋಲಿಸಬೇಕು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ ಮಾತನಾಡಿ, ಮುಂದಿನ ಎರಡ್ಮೂರು ತಿಂಗಳಲ್ಲಿ ಹಿರಿಯೂರು ಉಪಚುನಾವಣೆ ನಡೆಯಲಿದ್ದು ಬರುವ ದಿನಗಳಲ್ಲಿ ಚುನಾವಣೆ ಆಯೋಗ ದಿನಾಂಕ ಘೋಷಿಸುವ ಸಾಧ್ಯತೆಗಳಿವೆ. ಉಪಚುನಾವಣೆ ಅಂಗವಾಗಿ ಪ್ರಥಮ ಸಭೆ ಇದಾಗಿದ್ದು ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಗಲಿರುಳು ಎನ್ನದೆ ಕರ್ತವ್ಯ ನಿರ್ವಹಿಸಬೇಕು. ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಯಾರೇ ಆಗಿರಲಿ ಅದು ಮುಖ್ಯವಲ್ಲ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೇ ಅಭ್ಯರ್ಥಿ ಎಂದು ಪರಿಗಣಿಸಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಹಾಗೂ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವ ಮೂಲಕ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷವನ್ನು ತಳ ಮಟ್ಟದಿಂದ ಮತ್ತಷ್ಟು ಸದೃಢಗೊಳಿಸಿ ಸಂಘಟನೆಯನ್ನು ಬಲಪಡಿಸಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಬೇಕು ಎಂದರು.
ಬಿಜೆಪಿ ಹಿರಿಯ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್ ಮಾತನಾಡಿ, ಹಿರಿಯೂರಿನಲ್ಲಿ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ.
ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದರು.ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ ಅಭ್ಯರ್ಥಿ ಯಾರೇ ಆದರೂ ಎಲ್ಲರು ಒಟ್ಟಾಗಿ ಕೆಲಸ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸೋಣ. ಒಟ್ಟಿನಲ್ಲಿ ಹಿರಿಯೂರಿನಲ್ಲಿ ಎನ್ ಡಿಎ ಅಭ್ಯರ್ಥಿ ಗೆಲ್ಲಿಸೋ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆಟಿ ಕುಮಾರಸ್ವಾಮಿ,ಸಹ ಪ್ರಭಾರಿ ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್ ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್ ಯಾದವ್, ಮುಖಂಡರಾದ ವಿಶ್ವನಾಥ್, ಜೆಬಿ ರಾಜು, ಎಂಎಸ್ ರಾಘವೇಂದ್ರ, ಸೋಮಣ್ಣ, ಹರ್ಷ, ದ್ಯಾಮಣ್ಣ, ಮಂಜುಳಮ್ಮ, ಯಶವಂತರಾಜ್, ತಮ್ಮಣ್ಣ, ಹಾಲಪ್ಪ, ಜಯರಾಮ್,ನಿತಿನ್ ಗೌಡ, ಯೋಗೇಶ್ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.