ವೈರಮುಡಿ ಬ್ರಹ್ಮೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Mar 03 2024, 01:31 AM IST

ವೈರಮುಡಿ ಬ್ರಹ್ಮೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ, ವೈರಮುಡಿ ಉತ್ಸವಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಉತ್ತಮ ಶೌಚಾಲಯ, ವಾಹನ ನಿಲುಗಡೆಗೆ ವ್ಯವಸ್ಥಿತ ಸ್ಥಳ ಕಲ್ಪಿಸುವುದು, ಬ್ಯಾರಿಕೇಟ್, ವಿದ್ಯುತ್‌ ದೀಪಗಳು, ಕಲ್ಯಾಣಿಗಳ ಸ್ವಚ್ಛತೆ, ತುರ್ತು ಆರೋಗ್ಯ ಸೇವೆ, ಸಮರ್ಪಕವಾದ ಪೊಲೀಸ್ ಬಂದೋಬಸ್ತ್ ಗೆ ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆಯಲ್ಲಿ ಮಾರ್ಚ್ 21ರಂದು ನಡೆಯುವ ವೈರಮುಡಿ ಉತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ವೈರಮುಡಿ ಉತ್ಸವದ ಅಂಗವಾಗಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಮಾರ್ಚ್ 16 ರಿಂದ 28ರವರೆಗೆ ವೈರಮುಡಿ ಬ್ರಹ್ಮೋತ್ಸವ ನಡೆಯಲಿದೆ. ಮಾ.21ರಂದು ವೈರಮುಡಿ ಉತ್ಸವ ನಡೆಯಲಿದೆ. ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ, ವೈರಮುಡಿ ಉತ್ಸವಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಉತ್ತಮ ಶೌಚಾಲಯ, ವಾಹನ ನಿಲುಗಡೆಗೆ ವ್ಯವಸ್ಥಿತ ಸ್ಥಳ ಕಲ್ಪಿಸುವುದು, ಬ್ಯಾರಿಕೇಟ್, ವಿದ್ಯುತ್‌ ದೀಪಗಳು, ಕಲ್ಯಾಣಿಗಳ ಸ್ವಚ್ಛತೆ, ತುರ್ತು ಆರೋಗ್ಯ ಸೇವೆ, ಸಮರ್ಪಕವಾದ ಪೊಲೀಸ್ ಬಂದೋಬಸ್ತ್ ಗೆ ಕ್ರಮ ವಹಿಸಬೇಕು ಎಂದರು.

ಮಂಡ್ಯ- ಜಕ್ಕನಹಳ್ಳಿ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಸ್ಥಳೀಯ ರಸ್ತೆಗಳು ಮಾರ್ಚ್ 15 ರೊಳಗೆ ದುರಸ್ತಿಯಾಗಬೇಕು. ಭಕ್ತರಿಗೆ ತೊಂದರೆಯಾಗದಂತೆ ಹೆಚ್ಚಿನ ಬಸ್ ವ್ಯವಸ್ಥೆಯಾಗಬೇಕು. ಪ್ರವಾಸಿ ಮಂದಿರದ ಬಳಿಯಿಂದ ದೇವಸ್ಥಾನದವರೆಗೆ ವಯೋವೃದ್ಧ ಭಕ್ತರಿಗೆ ಉಚಿತ ಬಸ್ ಅಥವಾ ಮಿನಿ ಬಸ್ ವ್ಯವಸ್ಥೆಯಾಗಬೇಕು. ಈ ವರ್ಷ ಯಾವುದೇ ಭಕ್ತರು ಬೀದಿಯಲ್ಲಿ ಮಲಗಬಾರದು ಎಂದು ಜರ್ಮನ್ ಟೆಂಟ್ ನಿರ್ಮಿಸಲಾಗುತ್ತಿದೆ ಎಂದರು.

ವೈರಮುಡಿಯ ಬ್ರಹ್ಮೋತ್ಸವ ಹಾಗೂ ಶನಿವಾರ, ಭಾನುವಾರಗಳಂದು ನಡೆಯುವ ದೇವಸ್ಥಾನದ ಉತ್ಸವ ಬೀದಿಗಳಲ್ಲಿ ಯಾವುದೇ ಭಕ್ತರು ಪಾರ್ಕಿಂಗ್ ಮಾಡದಂತೆ ಪೊಲೀಸರು ಎಚ್ಚರ ವಹಿಸಬೇಕು. ದೇವಸ್ಥಾನದ ಸುತ್ತ ಶಾಶ್ವತ ಆಕರ್ಷಕ ಕಸದ ತೊಟ್ಟಿಗಳನ್ನು ಗ್ರಾಪಂ ವತಿಯಿಂದ ವ್ಯವಸ್ಥೆ ಮಾಡಿ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಬೇಸಿಗೆ ಬಿಸಿಲಿನ ತಾಪ ಹೆಚ್ಚಿರುವ ಕಾರಣ ವೈರಮುಡಿಯಂದು ಭಕ್ತರಿಗೆ ದಾನಿಗಳು ಮುಂದೆ ನಿಂತು ಜಿಲ್ಲಾಡಳಿತದ ಜೊತೆ ಸಹಕರಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಮಾರ್ಚ್ 21 ರಂದು ವೈರಮುಡಿ-ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಬೆಳಗ್ಗೆ ಜಿಲ್ಲಾ ಖಜಾನೆಯಿಂದ ಸ್ಥಾನೀಕರಿಗೆ ಹಸ್ತಾಂತರ ಮಾಡಲಾಗುವುದು. ಮಂಡ್ಯದ ಲಕ್ಷ್ಮಿಜರ್ನಾಧನ ದೇವಸ್ಥಾನ ಪ್ರಥಮ ಪೂಜೆ ನಂತರ ಕಿರಂಗೂರು, ದರಸಕುಪ್ಪೆ, ಜಕ್ಕನಹಳ್ಳಿಕ್ರಾಸ್ ಮುಂತಾದ ಸ್ಥಳಗಳಲ್ಲಿ ಪೂಜೆ ಸಲ್ಲಿಸಲಾಗುವುದು ಎಂದರು.

ವೈರಮುಡಿ ತೆಗೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯೆ ಪೂಜೆಯಾಗುವ ಎಲ್ಲಾ ಹಳ್ಳಿಗಳಲ್ಲಿ ದಾನಿಗಳು ಪೂಜೆ ಸಲ್ಲಿಸುವ ಸ್ಥಳಗಳಲ್ಲಿ ಹೆಚ್ಚಿನ ರೀತಿಯಲ್ಲಿ ಕುಡಿಯುವ ನೀರು, ಮಜ್ಜಿಗೆ ಹಾಗೂ ಪ್ರಸಾದದ ವ್ಯವಸ್ಥೆ ಮಾಡಬೇಕು ಎಂದರು.

ಉತ್ಸವದ ವೇಳೆ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲು ಕಾಣಿಕೆ ನೀಡುವ ಸಲುವಾಗಿ ಪ್ರತ್ಯೇಕ ಖಾತೆ ಪ್ರಾರಂಭಿಸಲಾಗಿದೆ. ದಾನಿಗಳು ದೇವಸ್ಥಾನದ ಇಒ ಕಚೇರಿಗೆ ಹಣ ಜಮೆ ಮಾಡಿ ರಶೀದಿ ಪಡೆದುಕೊಳ್ಳಬೇಕು. ದೇವಸ್ಥಾನದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನದ ಮಾಲೀಕರು ತಮ್ಮ ನಿವೇಶನವನ್ನು ಸ್ವಚ್ಛವಾಗಿಟ್ಟಿಕೊಳ್ಳಬೇಕು. ಇಲ್ಲವಾದಲ್ಲಿ ನೊಟೀಸ್ ಜಾರಿ ಮಾಡಿ ಗ್ರಾಪಂ ಸ್ವಚ್ಛತೆ ಮಾಡಿಸಿ ಸ್ವಚ್ಛತೆಯ ಶುಲ್ಕ ವಸೂಲು ಮಾಡಿ ಎಂದರು.

ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಿದ ವಿಷಯಗಳು:

ಸಭೆಯಲ್ಲಿ ಪ್ರಮುಖವಾಗಿ ವೈರಮುಡಿ ಉತ್ಸವಕ್ಕೆ ಭಕ್ತರಿಗೆ 150 ವಿಶೇಷ ಬಸ್ ಸೌಕರ್ಯ, ಉತ್ಸವ ಬೀದಿಗಳ 9 ಕಂಡೆ ಬೃಹತ್ ಪಡದೆ ಅಳವಡಿಸಿ ಉತ್ಸವ ವೀಕ್ಷಿಸಲು ಅವಕಾಶ, ದೇಗುಲ, ಕಲ್ಯಾಣಿ, ಬೆಟ್ಟ ಬಳಿ ಖಾಸಗಿ ವಾಹನ ಪಾರ್ಕಿಂಗ್ ಗೆ ನಿಷೇಧ, ಬೇರೆಗೆ ವ್ಯವಸ್ಥಿತವಾಗಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸುವುದು, ಭದ್ರತೆಗೆ 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ, ಗುಣಮಟ್ಟದ ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ, ನಿರಂತರ ಸ್ವಚ್ಛತೆಗೆ ವಿವಿಧ ತಾಲೂಕು ಕೇಂದ್ರಗಳಿಂದ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ವಾಹನದ ವ್ಯವಸ್ಥೆ, ವಿಶೇಷ ಉತ್ಸವಗಳಿಗೆ ನುರಿತ ನಾದಸ್ವರ ವಾದ್ಯಗಾರರ ತಂಡ ನಿಯೋಜನೆ ಮಾಡಲು ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ದೇವಸ್ಥಾನದ ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಕರಗಂರಾಮಪ್ರಿಯ, ರಾಮಾನುಜರ ಸನ್ನಿಧಿ ಅರ್ಚಕ ಆನಂದಾಳ್ವಾರ್ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ , ಡಿವೈಎಸ್ಪಿ ಪಿ ಮುರುಳಿ, ಗ್ರಾಪಂ ಅಧ್ಯಕ್ಷ ಸೋಮಶೇಖರ್, ಪಾಂಡವಪುರ ತಹಸೀಲ್ದಾರ್ ಶ್ರೇಯಸ್, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.