ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರುಸಹಕಾರ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಮೀಸಲಾತಿಯನ್ನು ನೀಡುವ ಮಸೂದೆಯನ್ನು ರಚಿಸಿದ್ದು ಶೀಘ್ರದಲ್ಲೇ ಇದು ಜಾರಿಯಾಗಲಿದೆ. ಹಾಗಾಗಿ ಈ ಕ್ಷೇತ್ರದಲ್ಲಿರುವ ಎಲ್ಲರೂ ಒಗ್ಗಟ್ಟಾಗಿ ಮಿಸಲಾತಿಯ ಸೌಲಭ್ಯವನ್ನು ಪಡೆದು ಆರ್ಥಿಕವಾಗಿ ಬಲಿಷ್ಟರಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಎವಿಎಸ್‌ಎಸ್‌ನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸರ್ಕಾರ ಮೀಸಲಾತಿಯನ್ನು ಸಹಕರ ಕ್ಷೇತ್ರಕ್ಕೂ ವಿಸ್ತರಿಸಬೇಕು ಎಂಬ ನಿಟ್ಟಿನಲ್ಲಿ ವಿರೋಧ ಪಕ್ಷಗಳ ವ್ಯಾಪಕ ಟೀಕೆ, ವ್ಯಂಗ್ಯಗಳ ನಡುವೆಯೂ ಈ ಮಸೂದೆಯನ್ನು ಮುಖ್ಯಮಂತ್ರಿ ಹಾಗೂ ಎಲ್ಲಾ ಪಕ್ಷದ ಮಂತ್ರಿಗಳು, ಸಹಕಾರ ಸಚಿವರ ದಿಟ್ಟ ನಿರ್ಧಾರದಿಂದ ಈ ಮಸೂದೆಯನ್ನು ಅಂಗೀಕರಿಸಿದ್ದು ಇದರಿಂದ ಭವಿಷ್ಯತ್ತಿನಲ್ಲಿ ಈ ವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ (ಎವಿಎಸ್‌ಎಸ್) ರಾಜ್ಯದಲ್ಲಿ ಮೊದಲ ಬಾರಿಗೆ ಟಿ.ನರಸೀಪುರದಲ್ಲಿ ಆರಂಭಗೊಂಡಿತು. ಈಗ ಇದು ರಾಜ್ಯಾದ್ಯಂತ ೨೮ ಘಟಕಗಳನ್ನು ಹೊಂದಿದೆ. ಈ ಸಹಕಾರ ಸಂಘವನ್ನು ಮತ್ತಷ್ಟು ಬಲಗೊಳಿಸಲು ಇಲ್ಲಿರುವ ಪದಾಧಿಕಾರಿಗಳು, ಸದಸ್ಯರು ಹೆಚ್ಚು ಶ್ರಮ ವಹಿಸಬೇಕು. ಗ್ರಾಮೀಣ ಭಾಗದ ಬಡವರನ್ನು ಈ ಸಂಘದ ಸದಸ್ಯರಾಗಿ ಮಾಡಿಕೊಂಡು ಅವರ ಆರ್ಥಿಕಾಭಿವೃದ್ಧಿಗೆ ಸಹಾಯ ನೀಡಬೇಕು. ದೇಶದಲ್ಲಿ ಸಾವಿರಾರು ಜಾತಿಗಳು ಪರಿಶಿಷ್ಟ ಜಾತಿಗೆ ಸೇರಿಕೊಂಡು ಅನೇಕ ಸವಲತ್ತುಗಳನ್ನು ಪಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ೧೦೦ಕ್ಕೂ ಹೆಚ್ಚು ಜಾತಿಗಳು ಪರಿಶಿಷ್ಟ ಜಾತಿಯ ಕಲಂನಲ್ಲಿ ಸೇರುತ್ತಾರೆ. ಈಗ ಒಳ ಮೀಸಲಾತಿ ಜಾರಿಯಾಗುತ್ತಿದೆ.ಇದು ಜಾರಿಯಾದಲ್ಲಿ ನಿಜವಾಗಿಯೂ ಮೀಸಲಾತಿಯ ಅಗತ್ಯತೆ ಇರುವ ಸಮುದಾಯ ಈ ಸೌಲಭ್ಯವನ್ನು ಪಡೆದುಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ನಾವು ಈ ಬಗ್ಗೆ ಇಂದಿನಿಂದಲೇ ಜಾಗರೂಕರಾಗಿರಬೇಕು, ನಾವು ಪಕ್ಷಾತೀತವಾಗಿ ಒಗ್ಗಟ್ಟನ್ನು ತೋರಿ ಈ ಮೀಸಲಾತಿಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಎವಿಎಸ್‌ಎಸ್‌ನ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ನಮ್ಮ ಸಂಘ ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ನಾವು ಇನ್ನಷ್ಟು ಬಲಿಷ್ಟಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಎಲ್ಲೆಡೆ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಬಡ, ತಳ ಸಮುದಾಯ ವರ್ಗ ಆರ್ಥಿಕವಾಗಿ ಮುಂದೆ ಬರಬೇಕು ಎಂಬ ಉದ್ದೇಶ ನಮ್ಮ ಸಂಘಕ್ಕಿದೆ. ಈ ನಿಟ್ಟಿನಲ್ಲಿ ನಮ್ಮ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಇದನ್ನು ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಬಲಿಷ್ಟಗೊಳಿಸುವ ಕೆಲಸ ಮಾಡಬೇಕು ಎಂದರು.ನಳಂದ ಬುದ್ದ ವಿಹಾರದ ಬೋಧಿರತ್ನ ಬಂತೇಜಿ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಸಮಾಜ ಸೇವಕ ಲೋಕೇಶ್ ಸೀಗಡಿ, ಮಾಂಬಳ್ಳಿ ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಬಿಆರ್‌ಸಿ ನಂಜುಂಡಯ್ಯ, ಪಪಂನ ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ, ಮಲ್ಲು, ಅಗರ ಲಿಂಗರಾಜು, ವೈ.ಬಿ. ನಂಜುಂಡಸ್ವಾಮಿ, ಮಹಾದೇವಮ್ಮ, ಶಂಕರ್, ಸ್ವಾಮಿ ರೇವಣ್ಣ, ಡಾ. ಶ್ರೀಧರ್, ರುದ್ರಯ್ಯ, ರಾಜಶೇಖರ್, ಪುಟ್ಟರಾಜು ಸೇರಿದಂತೆ ಅನೇಕರು ಇದ್ದರು.