ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಒಳ ಮೀಸಲಾತಿ ಜಾರಿಗಾಗಿ ನಿಖರ ದತ್ತಾಂಶವನ್ನು ಸಂಗ್ರಹಿಸಲು ಮನೆಮನೆಗೆ ಜನಗಣತಿ ಅಧಿಕಾರಿಗಳು ಬರುತ್ತಿದ್ದು, ಈ ವೇಳೆ ನಿಮ್ಮ ಮೂಲ ಜಾತಿಯ ಹೆಸರನ್ನು ಹೇಳಿ ಮೀಸಲಾತಿ ಸೌಲಭ್ಯವನ್ನು ಪಡೆಯಿರಿ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗಾಗಿ ನಿಖರ ದತ್ತಾಂಶವನ್ನು ಸಂಗ್ರಹಿಸಲು ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ವತಿಯಿಂದ ಮೇ ೫ರಿಂದ ಮೇ ೧೭ರ ತನಕ ಪ್ರತಿ ಮನೆಗೆ ತೆರಳಿ ಸರ್ಕಾರಿ ನೌಕರರು ಜಾತಿ ಜನಗಣತಿ ಪ್ರಾರಂಭಿಸಲಿದ್ದಾರೆ ಎಂದರು. ಹಾಗಾಗಿ ಮೀಸಲಾತಿಯ ಸೌಲಭ್ಯವನ್ನು ಪಡೆಯಲು ರಾಜ್ಯದ ೧೦೧ ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿಗಳಾದ ಮಾದಿಗ, ಹೊಲೆಯ, ಸಮಗಾರ, ಡೋಹರ, ಮಚ್ಚೆಗಾರ, ಬೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿಯಾಗಿ ವಿವರವನ್ನು ಸ್ಪಷ್ಟವಾಗಿ ತಿಳಿಸಬೇಕೆಂದು ಕೋರುತ್ತೇವೆ. ಈ ಜನಗಣತಿಯಲ್ಲಿ ಆನ್‌ಲೈನ್‌ನಲ್ಲಿ ವಿವರ ನೀಡಬಯಸುವವರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ನಿಮ್ಮ ಜಾತಿ ಪ್ರಮಾಣಪತ್ರದ ಆರ್‌ಡಿ ನಂಬರನ್ನು ಅಪ್‌ಲೋಡ್ ಮಾಡಬಹುದು ಎಂದು ಹೇಳಿದರು.
ಅತಿಮುಖ್ಯವಾಗಿ ಆದಿ ಕರ್ನಾಟಕ (ಏ.ಕೆ.), ಆದಿದ್ರಾವಿಡ (ಎ.ಡಿ.), ಆದಿಆಂಧ್ರ, ಹರಿಜನ ಎಂದು ಬರೆಸಬಾರದು. ಈ ಜನಗಣತಿ ಕಾರ್ಯಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಎಲ್ಲಾ ಹಂತದ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿಯನ್ನು ಬರೆಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಪ್ರತಿಯೊಬ್ಬ ನಾಗರಿಕರಿಗೆ ಸಿಗಬೇಕು, ಸಂವಿಧಾನ ಪೀಠಿಕೆ. ಮೀಸಲಾತಿಯ ಸೌಲಭ್ಯವನ್ನು ಪಡೆಯದ ವಂಚಿತ ಜಾತಿಗಳಿಗೆ ಆದ್ಯತೆ ಮೇಲೆ ಮೀಸಲಾತಿಯನ್ನು ನೀಡಬೇಕು ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಆರ್.ಪಿ.ಐ ಪ್ರಣಾಳಿಕೆಯಲ್ಲಿ ದಾಖಲಿಸಿದ್ದಾರೆ ಎಂದು ಹೇಳಿದರು.ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯ ಕುಮಾರ್ ಮಾತನಾಡಿ, ಚನ್ನರಾಯಪಟ್ಟಣದ ಅಗ್ರಹಾರ ಬೀದಿಯ ವಾರ್ಡ್ ಸಂಖ್ಯೆ ೨೨ರಲ್ಲಿ ಜನಗಣತಿ ಮಾಡುತ್ತಿರುವ ಪ್ರಕಾಶ್ ಮತ್ತೊಂದು ಅರಸೀಕೆರೆ ತಾಲೂಕು ಬಾಣಾವರ ಹೋಬಳಿಯ ತೊಂಡಿಗೆಹಳ್ಳಿ ಗ್ರಾಮದ ಗಣತಿ ಮಾಡುತ್ತಿರುವ ಕೇಶವ ಮೂರ್ತಿ ಕರ್ತವ್ಯದ ವೇಳೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೇಷನ್ ಕಾರ್ಡ್ ಪಡೆದಾಗ ಎರಡು ಜನ ಬಿಟ್ಟರೇ ಉಳಿದವರ ಅಪ್ಲೋಡ್ ಮಾಡಲು ಆಗುತ್ತಿಲ್ಲ. ಇನ್ನು ಹುಟ್ಟಿದ ಮಗುವಿನ ಜೀರೋ ವಯಸ್ಸು ಕೂಡ ತೆಗೆದುಕೊಳ್ಳುತ್ತಿಲ್ಲ. ಆದರೆ ಡಿಸಿ ಗಣನೆಗೆ ತೆಗೆದುಕೊಳ್ಳಲು ಹೇಳಿದ್ದು, ಇನ್ನು ಮೂಲ ಜಾತಿ ಬರೆಯುವುದಕ್ಕೆ ಹೇಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರೆ ನಮಗೆ ಜನಗಣತಿ ಬಗ್ಗೆ ಹತ್ತು ನಿಮಿಷ ಮಾತ್ರ ತರಬೇತಿ ನೀಡಿದ್ದಾರೆ. ಮೂಲ ಜಾತಿ ಬರೆಯಲು ಗೊತ್ತಾಗಲಿಲ್ಲ ಎಂದಿದ್ದಾರೆ. ಆಯೋಗ ಮತ್ತು ಜಿಲ್ಲಾಡಳಿತ ಇದಕ್ಕೆ ಹೊಣೆಯಾಗುತ್ತಿಲ್ಲ. ಇದನ್ನು ಸರಿಯಾಗಿ ಪರಿಗಣಿಸಿ ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಬೂತ್ ಅಧ್ಯಕ್ಷ ವೆಂಕಟೇಶ್, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಶಶಿಕುಮಾರ್, ನಾಗರಾಜು, ಪ್ರಧಾನ ಕಾರ್ಯದರ್ಶಿ ಸತೀಶ್, ಇತರರು ಉಪಸ್ಥಿತರಿದ್ದರು.