ಸಾರಾಂಶ
ಕಡೂರು: ಪಟ್ಟಣದ ಸ್ವಚ್ಛತೆ ಮೂಲಕ ಜನರ ಆರೋಗ್ಯಕ್ಕೆ ನೆರವಾಗುವ ಪೌರಕಾರ್ಮಿಕರು ದುಶ್ಚಟಗಳಿಂದ ದೂರವಾಗಿ ತಮ್ಮ ಆರೋಗ್ಯದ ಬದುಕು ರೂಪಿಸಿಕೊಳ್ಳಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕಡೂರನ್ನು ಸುಂದರ ಪಟ್ಟಣವನ್ನಾಗಿ ರೂಪಿಸುವಲ್ಲಿ ಪೌರಕಾರ್ಮಿಕರ ಪರಿಶ್ರಮ ಹೆಚ್ಚಿನದಾಗಿದೆ. ಅವರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಸಮಾಜದ ಆರೋಗ್ಯಕ್ಕೂ ಸಹಾಯಕ ಎಂದರು,
ಸರಕಾರ ಪೌರ ಕಾರ್ಮಿಕರಿಗೆ ಅನೇಕ ವಿಶೇಷ ಸೌಲಭ್ಯ ಗಳನ್ನು ಒದಗಿಸುತ್ತಿದೆ. ತಮ್ಮ ಒತ್ತಡದ ಕಾರ್ಯದಲ್ಲಿ ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಂಡು ತಮ್ಮ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಿರುವುದು ವಿಶೇಷತೆಗೆ ಸಾಕ್ಷಿಯಾಗಿದೆ. ದೇಹ ದಂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರಿಗಾಗಿ ಕ್ರೀಡಾ ದಿನ ಮೀಸಲಿಡಲಾಗಿದೆ ಎಂದು ತಿಳಿಸಿದರು.ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಕ್ರೀಡಾಕೂಟಗಳಿಂದ ಒತ್ತಡದ ಮನಸ್ಸನಿಂದ ಹೊರಬರಲು ಸಾಧ್ಯವಾಗಲಿದ್ದು, ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆಯೇ ಮುಖ್ಯವಾಗಲಿದೆ ಎಂದರು.ಪುರಸಭಾ ಸದಸ್ಯರಾದ ಈರಳ್ಳಿ ರಮೇಶ್, ಮರುಗುದ್ದಿ ಮನು, ಯತಿರಾಜ್, ಗೋವಿಂದು, ಸೈಯ್ಯದ್ ಯಾಸೀನ್, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎ. ಗಿರೀಶ್, ತಿಮ್ಮಯ್ಯ, ಪರಿಸರ ಅಭಿಯಂತರ ಶ್ರೇಯಸ್ ಕುಮಾರ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್‍ಮೂರ್ತಿ, ಜಗದೀಶ್, ಶಂಕರ್, ಚಿನ್ನರಾಜು ಹಾಗೂ ಪುರಸಭೆ ಅಧಿಕಾರಿ ಸಿಬ್ಬಂದಿ ವರ್ಗದವರು ಇದ್ದರು.