ಪರಂಗಿ ಸಂಸ್ಕೃತಿ ದೂರವಿಟ್ಟು, ಕುಟುಂಬ ವ್ಯವಸ್ಥೆ ಗಟ್ಟಿಗೊಳಿಸಿ

| Published : Dec 12 2024, 12:33 AM IST

ಸಾರಾಂಶ

ಸ್ವಾವಲಂಬನೆ ಪರಿಕಲ್ಪನೆಯ ಸ್ವದೇಶ ಮೇಳ ಸಾರ್ವಜನಿಕ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಂಗಿ ಸಂಸ್ಕೃತಿಯನ್ನು ದೂರವಿಟ್ಟು, ಭಾರತೀಯ ಕುಟುಂಬ ವ್ಯವಸ್ಥೆ ಗಟ್ಟಿಗೊಳಿಸಿದರೆ ದೇಶದ ಆರ್ಥಿಕ ಸ್ಥಿತಿ ಸುಭದ್ರವಾಗುತ್ತದೆ ಎಂದು ಅರ್ಥಶಾಸ್ತ್ರಜ್ಞ, ಪರಿಸರ ತಜ್ಞ, ಸ್ವದೇಶೀ ಚಿಂತಕ ಪ್ರೊ.ಬಿ.ಎಂ.ಕುಮಾರಸ್ವಾಮಿ ತಿಳಿಸಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ಸ್ವದೇಶೀ ಜಾಗರಣ ಮಂಚ್ ದಾವಣಗೆರೆ ಹಮ್ಮಿಕೊಂಡಿದ್ದ ಸ್ವಾವಲಂಬನೆ ಪರಿಕಲ್ಪನೆಯ ಸ್ವದೇಶ ಮೇಳ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಆರ್ಥಿಕ ಪ್ರಗತಿಗೆ ಕುಟುಂಬ ವ್ಯವಸ್ಥೆಯ ಕಾಣಿಕೆಯೇ ಅತ್ಯಂತ ಮಹತ್ವದ್ದು ಎಂಬ ಸಂಗತಿಯನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.

ನಮ್ಮ ದೇಶದ ಆರ್ಥಿಕತೆ ಬಹಳ ‍ವಿಶೇಷ, ವೈಶಿಷ್ಟ್ಯವಾದುದ್ದು. ಇದು ಕುಟುಂಬ ಆದಾರಿತವಾಗಿರುವುದರಿಂದ ಇವೇ ಸಮಾಜದ ಮೂಲ ಘಟಕಗಳಾಗಿವೆ. ನಮ್ಮ ದೇಶದಲ್ಲಿ ಕುಟುಂಬಗಳ ಉಳಿತಾಯವೇ 30 ಬಿಲಿಯನ್ ಡಾಲರ್‌ನಷ್ಟಾಗಿದೆ. ವಿದೇಶಗಳಲ್ಲಿರುವ ಕಾರ್ಮಿಕರು ತಮ್ಮ ಕುಟುಂಬ ನಿರ್ವಹಣೆಗಾಗಿ ಭಾರತಕ್ಕೆ 2023ರಲ್ಲಿ 125 ಬಿಲಿಯನ್ ಡಾಲರ್ ಅಂದರೆ 10 ಲಕ್ಷ ಕೋಟಿ ರು.ಕಳಿಸಿದ್ದಾರೆ. ಇದು ವಿದೇಶೀ ಬಂಡವಾಳಕ್ಕೂ ಹೆಚ್ಚು ಎಂದು ಹೇಳಿದರು.

ಹಿರಿಯ ಜವಳಿ ವರ್ತಕ ಬಿ.ಸಿ.ಉಮಾಪತಿ ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯು ಅತ್ಯಂತ ಮಹತ್ವದ್ದಾಗಿದ್ದು, ಈಚೆಗೆ ಭಾರತೀಯರಲ್ಲೂ ಪಾಶ್ಚಾತ್ಯ ಸಂಸ್ಕೃತಿಯ ಪ್ರವೇಶವು ಹೆಚ್ಚುತ್ತಿದೆ. ಭ್ರಷ್ಟಾಚಾರ ಸೇರಿದಂತೆ ಇತರೆ ವಿಷಯಗಳನ್ನು ದೂರ ಮಾಡಿದರೆ, ಭಾರತವೇ ವಿಶ್ವದ ಅತೀ ದೊಡ್ಡ ಆರ್ಥಿಕ ಶಕ್ತಿಯಾಗುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಈ ನಿಟ್ಟಿನಲ್ಲಿ ದೇಶವಾಸಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಸ್ವದೇಶೀ ಜಾಗೃತಿ ವೇದಿಕೆ ರಾಷ್ಟ್ರೀಯತೆ ಮೂಡಿಸುವ ಸಂಸ್ಥೆಯಾಗಿದೆ. ದೇಶ, ಸ್ಥಳೀಯ ಉತ್ಪಾದನೆಯ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಪ್ರತಿಯೊಬ್ಬರೂ ಸ್ವದೇಶೀ ಉತ್ಪನ್ನಗಳನ್ನು ಬಳಸುವ ಮೂಲಕ ದೇಶದ ಆರ್ಥಿಕತೆಗೆ ತಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಯೋಗಸ, ಪ್ರಾಣಾಯಾಮದಿಂದ ಆರೋಗ್ಯ ಸಿಗುತ್ತದೆ. ಒಬ್ಬ ವ್ಯಕ್ತಿಯು ಆರೋಗ್ಯವಂತನಾಗಿದ್ದರೆ ಅದು ಕನಿಷ್ಟ 8 ಕೋಟಿ ಮೌಲ್ಯದ್ದು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಹಾಗಾಗಿ ಆರೋಗ್ಯವಂತರು ಸಮಾಜ, ದೇಶದ ಬಹುದೊಡ್ಡ ಶಕ್ತಿಯಾಗಿದ್ದರೆ. ಸದಾ ಆರೋಗ್ಯವಂತರಾಗಿರಲು ದೇಶೀಯ ವಸ್ತುಗಳನ್ನು ಹೆಚ್ಚು ಹೆಚ್ಚಾಗಿ ಬಳಸಬೇಕು. ವಿದ್ಯಾರ್ಥಿ, ಯುವಜನರು, ಮಹಿಳೆಯರು ಸಹ ದೇಶೀ ಉತ್ಪನ್ನಗಳ ಕಡೆಗೆ ಒಲವು ತೋರಬೇಕು ಸ್ವಾಮೀಜಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ, ವಕೀಲರಾದ ಮಂಜುಳಾ ಮಹೇಶ, ಚೇತನ್, ಮಾಜಿ ಮೇಯರ್ ಎಸ್.ಟಿ.ವೀರೇಶ, ಕೆ.ಬಿ.ಶಂಕರ ನಾರಾಯಣ, ಪ್ರಹ್ಲಾದ ತೇಲ್ಕರ್‌ ಇತರರು ಇದ್ದರು.