ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಒತ್ತಡದ ಬದುಕಿನಿಂದ ಹೊರಬಂದು ಮಾನಸಿಕವಾಗಿ ಸದೃಢರಾಗಲು ಕ್ರೀಡಾ ಚಟುವಟಿಕೆಗಳು ಅವಶ್ಯವಾಗಿವೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಕಂದಾಯ ಇಲಾಖೆ ನೌಕರರ ಸಂಘ, ಜಿಲ್ಲಾ ಕಂದಾಯ ಇಲಾಖೆ ವಿವಿಧ ವೃಂದ ಸಂಘಗಳ ಸಹಯೋಗದಲ್ಲಿ ಕಂದಾಯ ದಿನಾಚರಣೆ-2025ರ ಅಂಗವಾಗಿ ಹಮ್ಮಿಕೊಂಡ ಎರಡು ದಿನಗಳ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಕ್ರೀಡೆಗಳಿಂದ ಮಾನಸಿಕ, ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರಿ ನೌಕರರಿಗೆ ಒತ್ತಡ ಜಾಸ್ತಿ. ಕ್ರೀಡೆಗಳಲ್ಲಿ ಭಾಗವಹಿಸುವವರ ಆರೋಗ್ಯ ತಪಾಸಣೆ ಮಾಡಿದ ವರದಿಯಲ್ಲಿ ನೌಕರರ ರಕ್ತದ ಒತ್ತಡ ಹೆಚ್ಚಾಗಿರುವುದು ಕಂಡುಬಂದಿದೆ. ಆದ್ದರಿಂದ ಒತ್ತಡದ ಬದುಕಿನಿಂದ ಹೊರಬಂದು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಗಳಲ್ಲಿ ಸ್ಪರ್ಧಾ ಮನೋಭಾವನೆ ಮುಖ್ಯವಾಗಿದೆ. ಸೋಲು-ಗೆಲುವು ಸಾಮಾನ್ಯ. ಕ್ರೀಡೆ ಕೇವಲ ಮನೋರಂಜನೆಗೆ ಮಾತ್ರವಲ್ಲ ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಕಂದಾಯ ನೌಕರರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಸಂತೋಷ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಆರೋಗ್ಯವಂತರಾದಾಗ ಮಾತ್ರ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಕೇವಲ ಉತ್ತಮ ಆಹಾರ ಸೇವಿಸಿದರೆ ಸಾಲದು ಕ್ರೀಡೆ, ವ್ಯಾಯಾಮಗಳು ಅಗತ್ಯವಾಗಿವೆ. ಎರಡು ದಿನಗಳ ಕಾಲ ನಡೆಯುವ ಕ್ರೀಡೋತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸುವಂತಾಗಬೇಕು. ಅಂದಾಗ ಮಾತ್ರ ನಾವು ಮಾನಸಿಕವಾಗಿ, ದೈಹಿಕವಾಗಿ ಸಬಲರಾಗಲು ಸಾಧ್ಯವೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ನೌಕರರು ವರ್ಷಪೂರ್ತಿ ಕೆಲಸ ಮಾಡಿದ್ದು, ಈ ಎರಡು ದಿನ ಕ್ರೀಡೆಗಳಲ್ಲಿ ಮಹಿಳೆ ಹಾಗೂ ಪುರುಷರು ಪಾಲ್ಗೊಳ್ಳಬೇಕು. ಇದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಬರುವುದಿಲ್ಲ. ಆರೋಗ್ಯ ಸಹ ಚೆನ್ನಾಗಿರುತ್ತದೆ. ಸರ್ಕಾರಿ ನೌಕರರು ವರ್ಷದಲ್ಲಿ ಎರಡು ದಿನ ಕ್ರೀಡಾಪಟುಗಳಾಗಬೇಕು ಎಂಬ ಉದ್ದೇಶದಿಂದ ಈ ವರ್ಷ ಪ್ರಾರಂಭಿಸಲು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿದ್ದು, ಎಲ್ಲರೂ ಭಾಗವಹಿಸಿ ಕ್ರೀಡೆಗೆ ಮೆರಗುತರಲು ತಿಳಿಸಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನಿ ಕ್ರೀಡಾಕೂಟ ಆಯೋಜನೆ ಕುರಿತು ಮಾತನಾಡಿದರು. ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಸುಮಾರು 25 ವರ್ಷಗಳ ನಂತರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರರಿಗೆ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ. ಕಂದಾಯ ಇಲಾಖೆ ಮಹತ್ವದ ಇಲಾಖೆಯಾಗಿದ್ದು, ನಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಕೆಲಸ ಮಾಡುತ್ತಿದ್ದೇವೆ. ಕೆಲಸದ ಜೊತೆಗೆ ಆರೋಗ್ಯ ಮಹತ್ವದಾಗಿದ್ದು, ಈ ಕ್ರೀಡಾಕೂಟ ಒಂದೇ ದಿನಕ್ಕೆ ಸೀಮಿತವಾಗಿರದೇ ನಿರಂತರವಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ರಾಜ್ಯ ಕಂದಾಯ ಇಲಾಖೆ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ವಡವಡಗಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗುಡೂರ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಾಟೀಲ, ತಹಸೀಲ್ದಾರರಾದ ವಾಸುದೇವ ಸ್ವಾಮಿ, ಕಾವ್ಯಾಶ್ರೀ ಎಚ್, ಎಫ್.ಬಿ.ಮೊಮ್ಮನ್ನವರ, ನಿಂಗಪ್ಪ ಬಿರಾದಾರ, ವಿನೋದಹತ್ತಳ್ಳಿ, ಅಮರೇಶ ಪಮ್ಮಾರ, ಗಿರೀಶ ಸ್ವಾದಿ, ಸದಾಶಿವ ಮಕ್ಕೋಜಿ, ಮಹಾದೇವ ಸನಮೂರೆ, ವಿಜಯಕುಮಾರ ಕಡಕೋಳ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.