ಅಸ್ಪೃಶ್ಯತೆಯ ಜಾಢ್ಯ ಸಮಾಜದಿಂದ ತೊಲಗಲಿ: ಆಂಜನೇಯ

| Published : Feb 08 2024, 01:36 AM IST

ಅಸ್ಪೃಶ್ಯತೆಯ ಜಾಢ್ಯ ಸಮಾಜದಿಂದ ತೊಲಗಲಿ: ಆಂಜನೇಯ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಅವರು ದಲಿತರಿಗೆ ರಾಜಕೀಯ ಹಕ್ಕುಗಳು, ಸಾಮಾಜಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರು.

ಹಗರಿಬೊಮ್ಮನಹಳ್ಳಿ: ಅಂಬೇಡ್ಕರ್ ಅವರು ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆ ಮಾಡಲು ಹೋರಾಡಿದ ಧೀಮಂತ ನಾಯಕ ಎಂದು ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ಎಚ್. ಹುಲ್ಲಾಳ ತಿಳಿಸಿದರು.

ತಾಲೂಕಿನ ತಂಬ್ರಹಳ್ಳಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂಬೇಡ್ಕರ್ ಅವರ ಸಮಸಮಾಜ ನಿರ್ಮಾಣ ಈಗಲೂ ಕಷ್ಟಸಾಧ್ಯವಾಗಿದೆ. ಈವರೆಗೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ ಹೊರತು ಧಾರ್ಮಿಕ, ಸಾಮಾಜಿಕ ನ್ಯಾಯ ಕೆಳವರ್ಗಗಳಿಗೆ ದೊರಕಿಲ್ಲ. ಜನರ ಮನಸ್ಥಿತಿ ಬದಲಾದಾಗ ಮಾತ್ರ ಸಂವಿಧಾನ ಆಶಯಗಳು ಈಡೇರುತ್ತವೆ. ಅಸ್ಪೃಶ್ಯತೆಯ ವಿರುದ್ದ ಚಳವಳಿಯನ್ನು ಹುಟ್ಟುಹಾಕಿ, ಜಾತಿ ಏಣಿಶ್ರೇಣಿ ವ್ಯವಸ್ಥೆಯನ್ನು ಸಮಾಜದಿಂದ ತೊಲಗಿಸಲು ಅಂಬೇಡ್ಕರ್ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು ಎಂದರು.

ಶಿಕ್ಷಕ ಎಂ.ಎಸ್. ಕಲ್ಗುಡಿ ಮಾತನಾಡಿ, ಅಂಬೇಡ್ಕರ್ ಅವರು ದಲಿತರಿಗೆ ರಾಜಕೀಯ ಹಕ್ಕುಗಳು, ಸಾಮಾಜಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರು. ನಿರಂತರ ಜಾತಿ ನಿಂದನೆಗೊಳಗಾಗಿ ಶಿಕ್ಷಣವನ್ನು ಮುಗಿಸಿದ ಅಂಬೇಡ್ಕರ್, ವಿಶ್ವಜ್ಞಾನಿಯಾಗಿ ಭಾರತದ ಹೆಮ್ಮೆಯ ನಾಯಕರಾಗಿದ್ದಾರೆ. ಸಂವಿಧಾನ ಶಿಲ್ಪಿಯಾಗಿದ್ದ ಅಂಬೇಡ್ಕರ್ ಸಮಾನತೆ, ಭಾತೃತ್ವ ಸಾಧಿಸಬಲ್ಲ ಪ್ರಜಾಪ್ರಭುತ್ವವನ್ನು ಕಲ್ಪಿಸಿಕೊಟ್ಟರು ಎಂದರು.

ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿದರು. ಜಾಗೃತಿ ಜಾಥಕ್ಕೆ ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮಾ ಹನುಮೇಶ್ ಚಾಲನೆ ನೀಡಿದರು. ಉಪತಹಸೀಲ್ದಾರ್ ಶಿಲ್ಪಾ ಮೇಟಿ, ಗ್ರಾಪಂ ಉಪಾಧ್ಯಕ್ಷೆ ರುದ್ರಮ್ಮ ಮ್ಯಗಳಮನಿ, ಸದಸ್ಯರಾದ ಹರಿಜನ ದೊಡ್ಡಬಸಪ್ಪ, ಆನೇಕಲ್ ದೊಡ್ಡಬಸಪ್ಪ, ಸಂಡೂರು ಮೆಹಬೂಬ್, ಬಸಮ್ಮ, ನಿವೃತ್ತ ಇಒ ಟಿ. ವೆಂಕೋಬಪ್ಪ, ಪಿಡಿಒ ಕೃಷ್ಣಮೂರ್ತಿ, ಮುಖ್ಯಗುರುಗಳಾದ ಕೆ.ವಿ. ಲೋಕೇಶ್. ರೇಣುಕಮ್ಮ, ರೆಡ್ಡಿನಾಯ್ಕ, ಮೊರಾರ್ಜಿ ಪ್ರಾಂಶುಪಾಲ ಜಯಸೂರ್ಯ, ಪಿಎಸ್‌ಐ ಸುವಾರ್ತ, ಮಹಿಳಾ ಸಂಘದ ಅಧ್ಯಕ್ಷೆ ಎಚ್.ಬಿ. ಮಂಜುಳಾ, ಶಿಕ್ಷಕಿಯರಾದ ಕೌಶಲ್ಯ, ರುದ್ರಮ್ಮ ಇತರರಿದ್ದರು. ಕಾರ್ಯಕ್ರಮವನ್ನು ವಸತಿ ನಿಲಯಪಾಲಕ ನಾಗರಾಜ, ಶಿಕ್ಷಕ ಪ್ರದೀಪ್, ಗ್ರಂಥಾಲಯ ಮೇಲ್ವಿಚಾರಕ ಟಿ. ಪಾಂಡುರಂಗ ನಿರ್ವಹಿಸಿದರು.