ಆಂಗ್ಲ ಮಾಧ್ಯಮದ ವ್ಯಾಮೋಹ ಕಿತ್ತೊಗೆಯಿರಿ: ನಾಗೇಶ್‌

| Published : Nov 16 2024, 12:31 AM IST

ಸಾರಾಂಶ

ರಾಮನಗರ: ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಜೀವನ ನಡೆಯಲಿದೆ ಎಂಬ ಕೀಳರಿಮೆಯನ್ನು ಕಿತ್ತೊಗೆಯುವ ಕೆಲಸ ಮೊದಲು ಆಗಬೇಕಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಅಭಿಪ್ರಾಯಪಟ್ಟರು.

ರಾಮನಗರ: ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಜೀವನ ನಡೆಯಲಿದೆ ಎಂಬ ಕೀಳರಿಮೆಯನ್ನು ಕಿತ್ತೊಗೆಯುವ ಕೆಲಸ ಮೊದಲು ಆಗಬೇಕಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಅಭಿಪ್ರಾಯಪಟ್ಟರು.

ಶ್ರೀಭುವನೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ ವತಿಯಿಂದ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಕಾವ್ಯಯಾನ ಹಾಗೂ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೋಷಕರು ಮತ್ತು ವಿದ್ಯಾರ್ಥಿಗಳ ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಮೊದಲು ಕಡಿವಾಣ ಹಾಕದಿದ್ದಲ್ಲಿ ಕನ್ನಡ ಭಾಷೆಗೆ ಉಳಿಗಾಲವಿಲ್ಲ ಎಂದರು.

ಹರಿದು ಹಂಚಿ ಹೋಗಿದ ಕನ್ನಡ ನಾಡನ್ನು ಏಕೀಕರಣಗೊಳಿಸಲು ನಾಡಿನ ಹಿರಿಯರು ದುಡಿದಿದ್ದು ಅದರ ಫಲವಾಗಿ ಅಖಂಡ ಕರ್ನಾಟಕವಾಯಿತು. ಆದರೆ ಇಂದು ಆಳುವ ಅಧಿಕಾರಿ ಮತ್ತು ರಾಜಕಾರಣಿಗಳು ಕನ್ನಡಿಗರೇ ನಮ್ಮನ್ನು ಕೀಳಾಗಿ ಕಾಣುವಂತಾಗಿದ್ದರ ಫಲವೇ ಭಾಷೆ ಅಳಿಯುವಿಕೆಗೆ ಕಾರಣವಾಗಿದೆ. ಆಂಗ್ಲ ಭಾಷೆಯ ಬಗ್ಗೆ ಜನಸಾಮಾನ್ಯರಲ್ಲಿ ಮೂಡುತ್ತಿರುವ ಒಲವು ಹಾಗೂ ಭ್ರಮೆಯೇ ಇದಕ್ಕೆ ಮೂಲಕಾರಣ. ಪ್ರತಿಯೊಬ್ಬ ಕನ್ನಡಿಗನೂ ಮಾತೃ ಭಾಷೆಯಲ್ಲಿ ಜ್ಞಾನ ಪಡೆಯಬೇಕು. ಸರ್‌ ಎಂ.ವಿಶ್ವೇಶ್ವರಯ್ಯ, ಯು.ಆರ್.ರಾವ್ ರಂತಹ ಮೇಧಾವಿಗಳು ಓದಿದ್ದು ಕನ್ನಡ ಮಾಧ್ಯಮದಲ್ಲೇ ಎಂದು ತಿಳಿಸಿದರು.

ಶ್ರೀ ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ.ಚಂದ್ರಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಹಾಗೂ ಭಾಷಾ ಬೆಳವಣಿಗೆಗೆ ಹಲವರು ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ನಾಡು- ನುಡಿಗೆ ಶ್ರಮಿಸಿದವರನ್ನು ನೆನಪಿಸಿಕೊಳ್ಳಬೇಕು. ನಾಡಿನ ಪರಂಪರೆ ಸಂಸ್ಕೃತಿಯ ಬಗೆಗೆ ಮುಂದಿನ ಪೀಳಿಗೆ ಅಭಿಮಾನವಿಟ್ಟುಕೊಳ್ಳಬೇಕು ಎಂದರು.

ಸಾಹಿತಿ ಜಿ.ಎಚ್. ರಾಮಯ್ಯ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಂಡಿದೆ. ಕನ್ನಡ ಭಾಷೆ, ಕರ್ನಾಟಕ ತನ್ನದೇ ಆದ ನೆಲೆಗಟ್ಟನ್ನು ಹೊಂದಿದ್ದು, ಅಖಂಡ ಕರ್ನಾಟಕ ನಿರ್ಮಾಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ, ಶ್ರೀ ಭುವನೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಎಂ.ಚಂದ್ರಶೇಖರ್, ನಿವೃತ್ತ ಶಿಕ್ಷಕ ಕರಿತಿಮ್ಮೇಗೌಡ ವೇದಿಕೆಯಲ್ಲಿದ್ದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಾಜೇಶ್ ಕವಣಾಪುರ, ತಾಲೂಕು ಕೋಶಾಧ್ಯಕ್ಷ ಬಿ.ಕೆ.ನಂಜುಂಡಯ್ಯ, ಡಾ.ಬೈರೇಗೌಡ, ಆರ್.ವಿ.ಸಿ.ಎಸ್. ಕನ್ವೆನ್ ಷನ್ ಹಾಲ್ ಮಾಲೀಕ ಆರ್.ವಿ. ಸುರೇಶ್ ಭಾಗವಹಿಸಿದ್ದರು.

14ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ರಾಯರದೊಡ್ಡಿ ಸರ್ಕಲ್ ಬಳಿಯ ಶ್ರೀ ಭುವನೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಕಾವ್ಯಯಾನ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಬಿ.ಟಿ.ನಾಗೇಶ್ ಉದ್ಘಾಟಿಸಿದರು.